ADVERTISEMENT

25 ಸಾವಿರ ಕೋಳಿ ಮರಿಗಳಿಗೆ ಬೆಂಕಿ ಇಟ್ಟರು!

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 6:18 IST
Last Updated 27 ಡಿಸೆಂಬರ್ 2012, 6:18 IST

ತುಮಕೂರು: ಸುಮಾರು 25 ಸಾವಿರ ಕೋಳಿ ಮರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ಹೃದಯ ವಿದ್ರಾವಕ ಘಟನೆ ನಗರದ ಮರಳೂರು ಕೆರೆ ಬಳಿಯ ಅಶ್ವಿನಿ ಆಸ್ಪತ್ರೆಯ ಹಿಂಭಾಗ ಬುಧವಾರ ನಡೆದಿದೆ.

ಈ ಕೋಳಿ ಮರಿಗಳು ವಿಎಚ್‌ಎಲ್ ಕಂಪೆನಿಗೆ ಸೇರಿದ್ದವು ಎಂದು ಹೇಳಲಾಗುತ್ತಿದೆ. ಕಂಪೆನಿಯು ಈ ಕೋಳಿ ಮರಿಗಳನ್ನು ಮಾರಿತ್ತು. ಮಂಗಳವಾರ ರಾತ್ರಿ ಟೋಲ್‌ಗೇಟ್ ಬಳಿ ಕೆಲವರು ಈ ಮರಿಗಳನ್ನು ವಶಪಡಿಸಿಕೊಂಡು ಬುಧವಾರ ಬೆಳಿಗ್ಗೆ ಬೆಂಕಿ ಇಟ್ಟಿದ್ದಾರೆ.

ಅರ್ಧ ಸುಟ್ಟ ಕೋಳಿ ಮರಿಗಳ ಸ್ಥಿತಿ ಚಿಂತಾಜನಕವಾಗಿತ್ತು. ಅಷ್ಟು ಮರಿಗಳನ್ನು ಸುಟ್ಟರೂ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.
ಕೆಲವು ಸ್ಥಳೀಯ ಕೋಳಿ ಸಾಕಣೆದಾರರು ಈ ಕೃತ್ಯ ಎಸಗಿದ್ದಾರೆ. ಕಂಪೆನಿ ಕೋಳಿ ಮರಿಗಳನ್ನು ಸಾಕುವುದರಿಂದ ಸ್ಥಳೀಯ ಕೋಳಿ ಸಾಕಣಿಕೆದಾರರಿಗೆ ಒಳ್ಳೆಯ ಬೆಲೆ ಸಿಗುವುದಿಲ್ಲ ಎಂದು ಹೀಗೆ ಮಾಡಲಾಗುತ್ತಿದೆ. ಅಲ್ಲದೆ ಕೋಳಿ ಕಂಪೆನಿಗಳನ್ನು ಬೆದರಿಸುವ ಹುನ್ನಾರ ಕೂಡ ಈ ಘಟನೆ ಹಿಂದೆ ಇದೆ.

ಕೋಳಿ ಕಂಪೆನಿಗಳನ್ನು ಬೆದರಿಸುವ ಮೂಲಕ ಜಿಲ್ಲೆಯಲ್ಲಿ ಕೋಳಿ ಉದ್ಯಮವನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಹುನ್ನಾರ ಅಡಗಿದೆ ಎಂದು ಕಂಪೆನಿ ಕೋಳಿ ಸಾಕಣಿಕೆದಾರರಾದ ಮಂಚಕಲ್‌ಕುಪ್ಪೆ ನವೀನ್‌ಗೌಡ, ಕುಂದೂರು ರಮೇಶ್, ವಿರೂಪಾಕ್ಷಪ್ಪ ಮತ್ತಿತರರು ಆರೋಪಿಸಿದ್ದಾರೆ. ಒಂದು ಕೋಳಿ ಮರಿ ಬೆಲೆ ರೂ. 26 ಇದೆ. ಘಟನೆಯಿಂದ ಸುಮಾರು ರೂ. 6.5 ಲಕ್ಷ ನಷ್ಟ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.