ADVERTISEMENT

ವರ್ಷದಲ್ಲಿ 292 ಶಿಶು ಸಾವು

19 ತಾಯಿ ಮರಣ ಪ್ರಕರಣ ವರದಿ

​ಪ್ರಜಾವಾಣಿ ವಾರ್ತೆ
Published 12 ಮೇ 2025, 16:07 IST
Last Updated 12 ಮೇ 2025, 16:07 IST
(ಸಾಂದರ್ಭಿಕ ಚಿತ್ರ)
(ಸಾಂದರ್ಭಿಕ ಚಿತ್ರ)   

ತುಮಕೂರು: ಜಿಲ್ಲೆಯಲ್ಲಿ 2024ರ ಏಪ್ರಿಲ್‌ನಿಂದ 2025ರ ಮಾರ್ಚ್‌ ವರೆಗೆ 28,505 ಶಿಶುಗಳು ಜನಿಸಿದ್ದು, ಈ ಪೈಕಿ 292 ಶಿಶು ಸಾವನ್ನಪ್ಪಿವೆ. ಇದೇ ಅವಧಿಯಲ್ಲಿ 19 ತಾಯಂದಿರು ಮರಣ ಹೊಂದಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ, ತಾಯಿ ಮತ್ತು ಶಿಶು ಮರಣ ಪ್ರಕರಣಗಳ ಪರಿಶೀಲನಾ ಸಭೆಯಲ್ಲಿ ಆರ್‌ಸಿಎಚ್‌ ಅಧಿಕಾರಿ ಡಾ.ಸಿ.ಆರ್‌.ಮೋಹನ್‌ ಈ ಮಾಹಿತಿ ಹಂಚಿಕೊಂಡರು.

ಚಿಕ್ಕನಾಯಕನಹಳ್ಳಿಯಲ್ಲಿ–14, ಗುಬ್ಬಿ-16, ಕೊರಟಗೆರೆ-13, ಕುಣಿಗಲ್-8, ಮಧುಗಿರಿ-10, ಪಾವಗಡ-14, ಶಿರಾ, ತಿಪಟೂರು ತಲಾ 19, ತುಮಕೂರು-170, ತುರುವೇಕೆರೆಯಲ್ಲಿ 9 ಶಿಶುಗಳು ಸಾವು ಕಂಡಿವೆ. ಚಿಕ್ಕನಾಯಕನಹಳ್ಳಿ, ಶಿರಾ, ತಿಪಟೂರಿನಲ್ಲಿ ತಲಾ 2, ಮಧುಗಿರಿ, ಪಾವಗಡದಲ್ಲಿ ತಲಾ 1, ತುಮಕೂರು ತಾಲ್ಲೂಕಿನಲ್ಲಿ 11 ಮಂದಿ ತಾಯಂದಿರು ಮೃತಪಟ್ಟಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಮರಣ ಪ್ರಮಾಣ ತಗ್ಗಿದೆ ಎಂದು ಹೇಳಿದರು.

ADVERTISEMENT

ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕೆ.ಎಸ್.ರಂಗನಾಥ್, ‘2020ರಿಂದ 2025ರ ಏಪ್ರಿಲ್‌ ವರೆಗೆ 40 ಮಲೇರಿಯಾ, 305 ಆನೆಕಾಲು ರೋಗ, 1,807 ಡೆಂಗಿ, 566 ಚಿಕುನ್‌ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಖಚಿತಪಟ್ಟ ಮಲೇರಿಯಾ, ಆನೆಕಾಲು ರೋಗ ಪ್ರಕರಣಗಳು ಹೊರ ರಾಜ್ಯ ಮತ್ತು ಬೇರೆ ಜಿಲ್ಲೆಗಳಿಗೆ ಸೇರಿವೆ’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ‘ಸೊಳ್ಳೆಗಳ ಮೂಲಕ ಡೆಂಗಿ, ಚಿಕುನ್‌ ಗುನ್ಯಾ, ಮೆದುಳು ಜ್ವರ ಹರಡುತ್ತದೆ. ಸೊಳ್ಳೆ ನಿಯಂತ್ರಿಸಲು ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಸೂಚಿಸಿದರು.

ಆರೋಗ್ಯ ಇಲಾಖೆಯ ಡಾ.ಪ್ರಭಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.