ADVERTISEMENT

3 ಗಂಟೆ ವಿದ್ಯುತ್ ಕಡಿತ: ಕಾಂಗ್ರೆಸ್‌ಗೆ ಲಿಖಿತ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2012, 4:15 IST
Last Updated 2 ಅಕ್ಟೋಬರ್ 2012, 4:15 IST

ತುಮಕೂರು: ಜಿಲ್ಲೆಯಲ್ಲಿನ ವಿದ್ಯುತ್ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ನಗರದ ಬೆಸ್ಕಾಂ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟಿಸಲಾಯಿತು.

ನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದಿಂದ ಬೆಸ್ಕಾಂ ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸಿಗರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ವಿದ್ಯುತ್ ಸಮಸ್ಯೆ ನಿಬಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಡಾ.ರಫೀಕ್ ಅಹಮ್ಮದ್, ವಿದ್ಯುತ್ ಸಮಸ್ಯೆ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕಾಣಿಸಿಕೊಂಡಿದೆ. ರಾಜ್ಯ ಕತ್ತಲಲ್ಲಿ ಮುಳುಗಿದ್ದು, ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ನಗರಸಭೆ ಅಧ್ಯಕ್ಷೆ ದೇವಿಕಾ ಮಾತನಾಡಿ, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಿದ್ಯಾರ್ಥಿಗಳ ಓದಿಗೆ ತೀವ್ರ ತೊಂದರೆಯಾಗಿದ್ದು, ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿದ ಬೆಸ್ಕಾಂ ಜಿಲ್ಲಾ ಅಧೀಕ್ಷಕ ಚಂದ್ರಶೇಖರ್, ಪ್ರತಿದಿನ ಮೂರು ಗಂಟೆ ಮಾತ್ರ ವಿದ್ಯುತ್ ಕಡಿತ ಮಾಡಲಾಗುವುದು ಎಂಬ ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಪ್ರತಿಭಟನೆ ನೇತೃತ್ವವನ್ನು ನಯಾಜ್ ಅಹಮ್ಮದ್, ಆರ್.ರಾಜೇಂದ್ರ, ರಾಜೇಶ್ ದೊಡ್ಮನೆ, ಮುಬಾರಕ್ ಪಾಷಾ, ರವಿಕುಮಾರ್, ಶಶಿ, ಪ್ರಸನ್ನ, ಮೋಹನ್ ಇತರರು ವಹಿಸಿದ್ದರು.

ಸರ್ಕಾರದ ವೈಫಲ್ಯ
ಮಧುಗಿರಿ:
ರಾಜ್ಯ ಸರ್ಕಾರ ವಿದ್ಯುತ್ ಪೂರೈಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಬೆಸ್ಕಾಂ ಕಚೇರಿ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಎನ್.ಪರಶುರಾಂ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರ ಘಟಕ ಅಧ್ಯಕ್ಷ ಕೃಷ್ಣೇಗೌಡ, ವಿದ್ಯಾರ್ಥಿ ಘಟಕ ಅಧ್ಯಕ್ಷ ವೆಂಕಟೇಶ್, ಎಸ್‌ಸಿ ಘಟಕ ಅಧ್ಯಕ್ಷ ಮಧುಸೂಧನ್, ಕಾರ್ಯದರ್ಶಿ ರಾಜಶೇಖರ್, ಪಾಪೀರಣ್ಣ, ಕಾಂತರಾಜು, ಮಾಲಿಮರಿಯಪ್ಪ, ಪವನ್‌ಕುಮಾರ್, ಕೃಷ್ಣಪ್ಪ ಇತರ ಮುಖಂಡರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.