ADVERTISEMENT

₹20.6 ಲಕ್ಷಕ್ಕೆ 3 ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು

ಎಚ್ಚರಿಕೆಯ ನಡುವೆಯೂ ರಹಸ್ಯವಾಗಿ ನಡೆಯುತ್ತಿವೆ ಹರಾಜು!

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 7:25 IST
Last Updated 11 ಡಿಸೆಂಬರ್ 2020, 7:25 IST
   

ಪಾವಗಡ: ಚುನಾವಣಾ ಆಯೋಗದ ಎಚ್ಚರಿಕೆಯ ಹೊರತಾಗಿಯೂ ತಾಲ್ಲೂಕಿನ ಹಲವೆಡೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ಪ್ರಕ್ರಿಯೆ ಮುಂದುವರೆದಿದೆ.

ತಾಲ್ಲೂಕಿನ ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರದಲ್ಲಿರುವ ಮೂರೂ ಸದಸ್ಯತ್ವವನ್ನು ₹20.6 ಲಕ್ಷಕ್ಕೆ ಹರಾಜು ಕೂಗಲಾಗಿದೆ. ಹರಾಜಿನ ಮೊತ್ತವನ್ನು ಗ್ರಾಮದ ರಾಮ ದೇಗುಲದ ಜೀರ್ಣೋದ್ಧಾರಕ್ಕೆ ಬಳಸಿಕೊಳ್ಳಲು ಗ್ರಾಮದ ಮುಖಂಡರು ತೀರ್ಮಾನಿಸಿದ್ದಾರೆ. ಆದರೆ, ಹರಾಜಿನ ಬಗ್ಗೆ ಗ್ರಾಮದ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು, ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದಾರೆ.

ವೈ.ಎನ್.ಹೊಸಕೋಟೆ ಹೋಬಳಿಯ ಮಾರಮ್ಮನಹಳ್ಳಿಯ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಕ್ಕೆ ಸೇರಿದ ಸದಸ್ಯ ಸ್ಥಾನಗಳನ್ನು ಅವಿರೋಧವಾಗಿ ಅಂತಿಮಗೊಳಿಸಲಾಗಿದೆ. ಆದರೆ ಸದಸ್ಯ ಸ್ಥಾನಕ್ಕೆ ಆಯ್ಕೆಯಾದವರು ತಲಾ ₹50 ಸಾವಿರವನ್ನು ಗ್ರಾಮದ ತಿಪ್ಪೇರುದ್ರಸ್ವಾಮಿ ದೇಗುಲ ಅಭಿವೃದ್ಧಿಗೆ
ಕೊಡಬೇಕು ಎಂದು ಮುಖಂಡರು ತಿಳಿಸಿದ್ದಾರೆ. ಹಲವು ಗ್ರಾಮಗಳಲ್ಲಿ
ದೇಗುಲ ಅಭಿವೃದ್ಧಿ, ಗ್ರಾಮದ ಅಭಿವೃದ್ಧಿಗೆ ಹಣ ನೀಡುವ ಮೂಲಕ ಹರಾಜು ಪ್ರಕ್ರಿಯೆ ನಡೆಯುತ್ತಿವೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.