ತುಮಕೂರು: ಭೂ ದಾಖಲೆಗಳ ಉಪನಿರ್ದೇಶಕ ಕಚೇರಿಯಲ್ಲಿ ಮೂರು ದಿನಗಳ ಹಿಂದೆ 4 ಸಾವಿರ ದರಖಾಸ್ತು ಜಮೀನು ಪೋಡಿ ಅರ್ಜಿಗಳು ಬಾಕಿ ಉಳಿದಿದ್ದವು. ಆದರೆ ಮೂರೇ ದಿನದಲ್ಲಿ 3 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ!
ಇಷ್ಟು ದಿನಗಳು ಅರ್ಜಿಗಳಿಗೆ ಸಿಗದ ಮುಕ್ತಿ ಮೂರೇ ದಿನಗಳಲ್ಲಿ ಸಿಕ್ಕಿರುವುದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರಿಗೂ ಆಶ್ಚರ್ಯ ತರಿಸಿದೆ.
ನಗರದಲ್ಲಿ ಸೋಮವಾರ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರೇ ಈ ವಿಷಯ ಬಹಿರಂಗಪಡಿಸಿದರು.
‘ಪ್ರಗತಿ ಪರಿಶೀಲನೆಗೆ ಬರುತ್ತೇವೆ ಎಂಬ ಕಾರಣಕ್ಕೆ ಅರ್ಜಿ ವಿಲೇವಾರಿ ಮಾಡಲಾಗಿದೆ. ಎರಡು– ಮೂರು ದಿನಗಳಲ್ಲಿ ಮೂರು ಸಾವಿರ ಅರ್ಜಿ ವಿಲೇವಾರಿ ಮಾಡಲಾಗಿದೆ. ವಿಲೇವಾರಿ ಮಾಡಬಹುದಾದ ಅರ್ಜಿಗಳನ್ನು ಇಷ್ಟು ದಿನ ಯಾಕೆ ಇಟ್ಟುಕೊಳ್ಳಲಾಗಿತ್ತು. ಆಗುವ ಕೆಲಸ ಬಾಕಿ ಉಳಿಸಿಕೊಂಡಿದ್ದು ಯಾಕೆ? ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ದರಖಾಸ್ತು ಪೋಡಿ, ಹಕ್ಕುಪತ್ರ, ಬಗರ್‌ಹುಕುಂ ಅರ್ಜಿಗಳು ಸಕಾಲಕ್ಕೆ ವಿಲೇವಾರಿಯಾಗುತ್ತಿಲ್ಲ. ಅಧಿಕಾರಿಗಳು ನಿಮ್ಮ ಕೆಲಸವನ್ನು ನೀವು ಮಾಡಬೇಕು. ಯಾವುದೇ ಅರ್ಜಿ ಬಂದರೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು. ಬಾಕಿ ಉಳಿಸಿಕೊಂಡರೆ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ. ಒತ್ತಡ ಬರಲಿ ಎಂದು ಕಾಯುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ದರಖಾಸ್ತು ಪೋಡಿಗೆ ಜಿಲ್ಲೆಯಾದ್ಯಂತ 28,629 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 21,045 ತಿರಸ್ಕೃತಗೊಂಡಿವೆ. ಯಾವ ಕಾರಣಕ್ಕೆ ಅರ್ಜಿ ತಿರಸ್ಕರಿಸಲಾಗಿದೆ ಎಂಬ ಸಚಿವರ ಪ್ರಶ್ನೆಗೆ ಸೂಕ್ತ ಉತ್ತರ ಸಿಗಲಿಲ್ಲ. ಎಲ್ಲ ಗ್ರಾಮಗಳಲ್ಲಿ ಈ ಕುರಿತು ವಿಶೇಷ ಗ್ರಾಮ ಸಭೆ ನಡೆಸಬೇಕು. ಈಗಾಗಲೇ ಗುರುತಿಸಿರುವ ಆಸ್ತಿ ಹೊರೆತುಪಡಿಸಿ, ಬಿಟ್ಟು ಹೋದ ಜಮೀನಿನ ಮಾಹಿತಿ ಪಡೆಯಲು ಇದು ಸೂಕ್ತವಾಗುತ್ತದೆ ಎಂದು ಸಲಹೆ ಮಾಡಿದರು.
ತಹಶೀಲ್ದಾರ್, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಬಾಕಿ ಪ್ರಕರಣ ಸಂಖ್ಯೆಯ ಮಾಹಿತಿ ಪಡೆದ ಸಚಿವರು, ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ತುಮಕೂರು ತಹಶೀಲ್ದಾರ್ ನ್ಯಾಯಾಲಯದಲ್ಲಿ 299 ಪ್ರಕರಣ ಬಾಕಿ ಉಳಿದಿವೆ. ವಾರದಲ್ಲಿ ಬಗೆಹರಿಸುವ ಪ್ರಕರಣ 3 ತಿಂಗಳು ಕಾಲ ಎಳೆದುಕೊಂಡು ಹೋಗಿದ್ದಾರೆ. ಐದು ವರ್ಷ ಮೇಲ್ಪಟ್ಟ ಪ್ರಕರಣಗಳು ಇಂದಿಗೂ ವಿಲೇವಾರಿಯಾಗಿಲ್ಲ. ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿವೆ. ಜಿಲ್ಲೆಯಲ್ಲಿ ಮಾತ್ರ ಹಾಗೆಯೇ ಉಳಿದಿವೆ ಎಂದು ತರಾಟೆಗೆ ತೆಗೆದುಕೊಂಡರು.
ಮಧುಗಿರಿ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ 1,263 ಪ್ರಕರಣ ಉಳಿಸಿಕೊಳ್ಳಲಾಗಿದೆ. ಇನ್ನು ಯಾವ ಕಾಲಕ್ಕೆ ವಿಲೇವಾರಿಯಾಗುತ್ತವೆ. ತಿಂಗಳಲ್ಲಿ 11 ಪ್ರಕರಣ ವಿಲೇವಾರಿ ಮಾಡಲಾಗಿದೆ. ಬೇಜವಾಬ್ದಾರಿ ಎ.ಸಿ.ಗಳಿಂದ ಇಲಾಖೆಗೆ ಮುಜುಗರ ಆಗುತ್ತಿದೆ. ಇನ್ನು ಬೇರೆ ಯಾವ ಸ್ವರೂಪದಲ್ಲಿ ಹೇಳಬೇಕು ಎಂಬುವುದು ಗೊತ್ತಾಗುತ್ತಿಲ್ಲ ಎಂದು ಸಿಡಿಮಿಡಿಗೊಂಡರು.
ನೋಟಿಸ್ ನೀಡಲು ಸೂಚನೆ: ದರಖಾಸ್ತು ಪೋಡಿ ಪ್ರಕ್ರಿಯೆಯಲ್ಲಿ ವಿಳಂಬ, ಅರ್ಜಿ ಬಾಕಿ ಉಳಿಸಿಕೊಂಡ ತುರುವೇಕೆರೆ ತಹಶೀಲ್ದಾರ್ ಕುಂಞ ಅಹ್ಮದ್ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಗ್ರಾಮ ಆಡಳಿತಾಧಿಕಾರಿ ಹಂತದಲ್ಲಿ ಅಗತ್ಯ ವಿವರ ಸಲ್ಲಿಸಬೇಕಿದೆ. ಆಡಳಿತಾಧಿಕಾರಿ ಕೊರತೆಯಿಂದ ಕೆಲಸ ವಿಳಂಬವಾಗಿದೆ ಎಂದು ಅಹ್ಮದ್ ಪ್ರತಿಕ್ರಿಯಿಸಿದರು.
‘ಗೌರವವಾಗಿ ಮಾತನಾಡಿದರೆ ಗೌರವವಾಗಿ ಉತ್ತರ ಕೊಡಿ, ಸಿದ್ಧ ಉತ್ತರ ಹುಡುಕಿಕೊಂಡು ಸಭೆಗೆ ಬರುತ್ತಾರೆ. ಕಥೆ ಹೇಳಲು ನಾವೇ ಸಿಕ್ಕಿದ್ದೇವೆಯೇ? ಇಚ್ಛಾಶಕ್ತಿ ಕೊರತೆಯಿಂದ ಯಾವುದೇ ಕಾರ್ಯ ವೇಗ ಪಡೆಯುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಂದಾಯ ದಾಖಲೆ ಗಣೀಕರಣ ಮಾಡಲು ಸ್ಕ್ಯಾನರ್ ರಿಪೇರಿಯಾಗಿದೆ ಎಂದು ಅಹ್ಮದ್ ಉತ್ತರಿಸಿದರು.
‘ಕಳ್ಳನಿಗೊಂದು ಪಿಳ್ಳೆ ನೆವ’ ಎಂಬಂತಾಯಿತು ನಿಮ್ಮ ಮಾತು. ಸ್ಕ್ಯಾನರ್ ಬಂದು ಇನ್ನೂ ಎರಡು ತಿಂಗಳು ಆಗಿಲ್ಲ. ಆಗಲೇ ಹೇಗೆ ರಿಪೇರಿ ಆಯಿತು. ಸ್ವಲ್ಪ ಪ್ರಾಮಾಣಿಕತೆಯಿಂದ ಕೆಲಸ ಮಾಡಿ. ಯಾವುದೇ ಪ್ರಶ್ನೆಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಕೂಡಲೇ ನೋಟಿಸ್ ಜಾರಿ ಮಾಡುವಂತೆ ಸಚಿವರು ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ಗೆ ಸೂಚಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಭೂ ಮಾಪನಾ ಇಲಾಖೆ ಆಯುಕ್ತ ಮಂಜುನಾಥ್, ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಇತರರು ಹಾಜರಿದ್ದರು.
683 ಹೊಸ ಕಂದಾಯ ಗ್ರಾಮ
ಜಿಲ್ಲೆಯಲ್ಲಿ ಹೊಸದಾಗಿ 683 ಕಂದಾಯ ಗ್ರಾಮ ಗುರುತಿಸಲಾಗಿದೆ. ಇನ್ನೂ 50ರಿಂದ 100 ಗ್ರಾಮ ಗುರುತಿಸಬಹುದು. ಅರ್ಹ ಪ್ರದೇಶಗಳ ಪಟ್ಟಿ ಮಾಡಿ ಪ್ರಸ್ತಾವ ಸಲ್ಲಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು. ಜಿಲ್ಲೆಯಲ್ಲಿ 700 ಪ್ರದೇಶಗಳನ್ನು ಕಂದಾಯ ಗ್ರಾಮವಾಗಿ ಘೋಷಿಸಲಾಗುವುದು. ಜನರಿಗೆ ಹಕ್ಕುಪತ್ರ ನೀಡಿ ಶಾಶ್ವತ ಪರಿಹಾರ ನೆಮ್ಮದಿ ಕೊಡಿಸುವ ಕೆಲಸ ಮಾಡಲಾಗುವುದು. 6ರಿಂದ 7 ತಿಂಗಳಲ್ಲಿ ಕೆಲಸ ಮುಗಿಯಲಿದೆ ಎಂದು ಭರವಸೆ ನೀಡಿದರು. ಊರಿಗೆ ಹೊಂದಿಕೊಂಡಿದ್ದರೆ ಬಡಾವಣೆ ಮಾಡಿ ಗ್ರಾಮದಿಂದ 200 500 ಮೀಟರ್ ಇದ್ದರೆ ಉಪಗ್ರಾಮ ಕಿ.ಮೀ.ಗಿಂತ ದೂರವಿದ್ದು 50 ಮನೆಗಳಿಗಿಂತ ಹೆಚ್ಚಿದ್ದರೆ ಗ್ರಾಮ ಎಂದು ಮಾಡಿ. ಕಾನೂನಿನಲ್ಲಿ ಎಲ್ಲ ರೀತಿಯ ಅವಕಾಶಗಳಿವೆ ಎಂದು ಹೇಳಿದರು.
3 ತಿಂಗಳು ಗಡುವು
ಜಿಲ್ಲೆಯಲ್ಲಿ 5089 ಅರ್ಹ ಬಗರ್‌ಹುಕುಂ ಅರ್ಜಿಗಳು ಸ್ವೀಕೃತವಾಗಿವೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲ ಅರ್ಜಿ ವಿಲೇವಾರಿ ಮಾಡಬೇಕು ಎಂದು ಸಚಿವರು ಜಿಲ್ಲಾಧಿಕಾರಿಗೆ ಸೂಚಿಸಿದರು. ಅರ್ಜಿ ವಿಲೇವಾರಿಯಾಗದಿದ್ದರೆ ಸಚಿವ ಸಂಪುಟ ಮುಖ್ಯಮಂತ್ರಿಗೆ ಏನು ಉತ್ತರ ಕೊಡಬೇಕು? ಜನರು ದಾರಿಯಲ್ಲಿ ನಿಲ್ಲಿಸಿ ಇನ್ನು ಎಷ್ಟು ವರ್ಷ ಬೇಕೆಂದು ಕೇಳುತ್ತಾರೆ? ಅರ್ಜಿ ವಿಲೇವಾರಿ ಎಂದರೆ ಹಿಮಾಲಯ ಬೆಟ್ಟ ಹತ್ತಿ ಇಳಿಯುವುದಾ? ಯಾವ ಆಂದೋಲನವೂ ಪೂರ್ಣಗೊಳುತ್ತಿಲ್ಲ. ಎಲ್ಲವೂ ಆರಂಭದಲ್ಲಿಯೇ ಉಳಿಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಂಟಿ ಸರ್ವೆ ಕುಂಠಿತ
ಕಂದಾಯ ಅರಣ್ಯ ಭೂಮಿ ಗುರುತಿಸಲು ಎರಡೂ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸುವಂತೆ ಸರ್ಕಾರ ಆದೇಶಿಸಿದೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಸರ್ವೆ ಕಾರ್ಯಕ್ಕೆ ಕೈಜೋಡಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಚಿವರ ಗಮನಕ್ಕೆ ತಂದರು. ಉಪಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ವಿರುದ್ಧ ದೂರು ಸಲ್ಲಿಸಿದರು. ‘ಈ ವಿಷಯದ ಕುರಿತು ನನಗೆ ಒಂದು ಪತ್ರ ಬರೆಯಿರಿ. ಅರಣ್ಯ ಸಚಿವರ ಜತೆ ಮಾತನಾಡುತ್ತೇನೆ. ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸುತ್ತೇನೆ’ ಎಂದು ಸಚಿವರು ತಿಳಿಸಿದರು.
ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನ
ಸಭೆಯಲ್ಲಿ ಸಚಿವರು ಹಲವು ಗಂಭೀರ ವಿಚಾರಗಳ ಕುರಿತು ಚರ್ಚೆ ನಡೆಸುತ್ತಿದ್ದರೆ ಕೆಲ ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನರಾಗಿದ್ದರು. ಸಾಮಾಜಿಕ ಜಾಲ ತಾಣದಲ್ಲಿ ರೀಲ್ಸ್ ನೋಡುತ್ತ ಕುಳಿತಿದ್ದರು. ‘ಈ ಕುರಿತು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದು ಸಚಿವರು ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನಿಖೆಗೆ ಸೂಚನೆ ಜಿಲ್ಲಾಧಿಕಾರಿ ಸಹಿ
ದುರುಪಯೋಗಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಇದರ ಜತೆಗೆ ತನಿಖೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೂ ನಿರ್ದೇಶಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂತಹ ಘಟನೆಗಳಿಂದ ವ್ಯವಸ್ಥೆ ಮೇಲಿನ ಜನರ ವಿಶ್ವಾಸ ಕುಂದುತ್ತದೆ. ತಪ್ಪು ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಅಮಾನತು ಮಾಡಿದರೆ ಸಾಲದು ಸೇವೆಯಿಂದ ವಜಾಗೊಳಿಸಬೇಕು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಾರ್ಕಿಕ ಅಂತ್ಯ ಕಾಣಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.