ADVERTISEMENT

39 ಸಾವಿರ ಜಾನುವಾರಿಗೆ ಗೋಶಾಲೆಯಲ್ಲಿ ಆಶ್ರಯ: ಸಿಇಒ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 5:35 IST
Last Updated 1 ಆಗಸ್ಟ್ 2012, 5:35 IST

ಕೊರಟಗೆರೆ: ಜಿಲ್ಲೆಯಲ್ಲಿ ಒಟ್ಟು 26 ಗೋಶಾಲೆ ತೆರೆಯಲು ಜಿಲ್ಲಾಡಳಿತ ಉದ್ದೇಶಿಸಿದೆ. ಪ್ರತಿ ಗೋಶಾಲೆಯಲ್ಲಿಯೂ ತಲಾ 1500 ಜಾನುವಾರುಗಳಿಗೆ ಆಶ್ರಯ ನೀಡಲು ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗೋವಿಂದರಾಜು ಹೇಳಿದರು.

ತಾಲ್ಲೂಕಿನ ದಾಸರಹಳ್ಳಿ ಗೋಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಿಲ್ಲೆಯಲ್ಲಿ 19 ಗೋಶಾಲೆ ತೆರೆದು ರಾಸುಗಳಿಗೆ ಅಗತ್ಯವಾದ ಮೇವು ಮತ್ತು ನೀರಿನ ಸೌಕರ್ಯ ಕಲ್ಪಿಸಲಾಗಿದೆ ಎಂದರು.

ಆಂಧ್ರಪ್ರದೇಶದ ರಾಯದುರ್ಗ, ಕಣೇಕಲ್, ಸಮ್ಮತಗಿರಿ ಪ್ರದೇಶದಿಂದ ಮೇವು ಖರೀದಿಸಲಾಗುತ್ತಿದ್ದು, ಬರ ಪರಿಸ್ಥಿತಿಯಲ್ಲಿ ಜಾನುವಾರುರಕ್ಷಿಸಲು ಯತ್ನಿಸಲಾಗುತ್ತಿದೆ ಎಂದರು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೊಸದಾಗಿ 880 ಕೊಳವೆಬಾವಿ ಕೊರೆಯಲಾಗಿದೆ. ಸಾಧ್ಯವಿರುವೆಡೆ ಕೊಳವೆಬಾವಿಗಳ ಪುನಶ್ಚೇಃತನಕ್ಕೆ ಜಿ.ಪಂ ಎಂಜಿನಿಯರಿಂಗ್ ವಿಭಾಗಕ್ಕೆ ಸೂಚಿಸಿದ್ದೇನೆ. ಜಿಲ್ಲೆಯ ಸುಮಾರು 18 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ಸಮಸ್ಯೆ ಕಾಣಿಸಿಕೊಂಡಿದೆ. ಅಂಥ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.

ತಾಲ್ಲೂಕಿನ ವಡ್ಡಗೆರೆ, ಬಾಲೇನಹಳ್ಳಿ, ಕಲ್ಕೆರೆ, ರಂಗನಹಳ್ಳಿ ಗ್ರಾಮಗಳಲ್ಲಿಯೂಗೋಶಾಲೆ ತೆರೆಯಬೇಕು ಎಂದು ರೈತರು ಮನವಿ ಸಲ್ಲಿಸಿದರು. ದಾಸರಹಳ್ಳಿ, ಕಲ್ಕೆರೆ, ಗರುಗದೊಡ್ಡಿ ಗ್ರಾಮಗಳ ಕುಡಿಯುವ ನೀರು ಸಮಸ್ಯೆ ನಿವಾರಿಸಲು ಕೊಳವೆಬಾವಿ ಕೊರೆಸಲಾಗುವುದು ಎಂದು ಭರವಸೆ ನೀಡಿದರು.

ಸಹಕರಿಸದ ಅಧಿಕಾರಿಗಳು
ಕೊರಟಗೆರೆ: ತಾಲ್ಲೂಕಿನಲ್ಲಿ ತೆರೆದಿರುವ ಗೋಶಾಲೆಗಳಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡುತ್ತಿಲ್ಲ. ವ್ಯವಸ್ಥೆ ನಿರ್ವಹಿಸಲು ಕ್ರಮ ವಹಿಸುತ್ತಿಲ್ಲ ಎಂದು ತಹಶೀಲ್ದಾರ್ ವಿ. ಪಾತರಾಜು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದರು.

ತಾಲ್ಲೂಕಿನ ತುಂಬಾಡಿ ಗ್ರಾಮ ಪಂಚಾಯಿತಿಯ ಚುನಾಯಿತ ಪ್ರತಿನಿಧಿಗಳು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ದಾಸರಹಳ್ಳಿ ಗೋಶಾಲೆಗೆ ತುಂಬಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮಾಕಾಂತ್, ಕಾರ್ಯದರ್ಶಿ ಮಹಾಲಿಂಗಯ್ಯ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಸಹಕರಿಸುತ್ತಿಲ್ಲ. ಜಿಲ್ಲಾಧಿಕಾರಿ ಆದೇಶದಂತೆ ಅವರಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದರು.

ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿ ಕೇಂದ್ರಸ್ಥಾನದಲ್ಲಿ ವಾಸವಾಗಿಲ್ಲ. ಪಾವಗಡ ಮತ್ತು ತುಮಕೂರಿನಿಂದ ಪ್ರತಿದಿನ ಓಡಾಡುತ್ತಿದ್ದಾರೆ. ಗೋಶಾಲೆ ಬಗ್ಗೆ ತಾತ್ಸಾರ ಮನೋಭಾವ ತಾಳಿದ್ದಾರೆ. ಶುಲ್ಕ ಸಂಗ್ರಾಹಕ ಆರ್.ಎಸ್.ರಮೇಶ್, ಆರ್.ವೆಂಕಟೇಶ್ ಸ್ಥಳೀಯರಾಗಿದ್ದರೂ ಗೋಶಾಲೆ ಕೆಲಸಗಳಿಗೆ ಸಹಕರಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧವೂ ಶಿಸ್ತುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯ ನಿರ್ವಹಣಾಧಿಕಾರಿ ಸೋಮಣ್ಣ, ಪಶು ವೈದ್ಯಾಧಿಕಾರಿ ಡಾ.ರವಿಕುಮಾರ್, ಕಂದಾಯ ಅಧಿಕಾರಿ ಭೈರಪ್ಪ, ಗ್ರಾಮಲೆಕ್ಕಿಗ ಗುರುಪ್ರಸಾದ್ ಉಪಸ್ಥಿತರಿದ್ದರು.

ದನ-ಕರು ಉಪವಾಸ
ಪಾವಗಡ: ಗೋಶಾಲೆಗಳಲ್ಲಿ ಸಮರ್ಪಕವಾಗಿ ಮೇವು ವಿತರಣೆ ಆಗದಿರುವುದರಿಂದ ದನ-ಕರು ಉಪವಾಸ ಇರುವಂತಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ವಿನೋದಾ ರಾಮಾಂಜಿನಪ್ಪ ಮಂಗಳವಾರ ತಿಳಿಸಿದರು.

ಗೋಶಾಲೆಗಳಲ್ಲಿ ಮೇವಿದೆ. ನೌಕರರ ಕೊರತೆಯಿಂದ ಸಕಾಲಕ್ಕೆ ರೈತರನ್ನು ತಲುಪುತ್ತಿಲ್ಲ. ಗ್ರಾಮ ಪಂಚಾಯಿತಿ ನೌಕರರನ್ನು ನೇಮಿಸಿಕೊಳ್ಳುವ ಮೂಲಕ ಮೇವು ವಿತರಣೆ ಚುರುಕಗೊಳಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ತಾಲ್ಲೂಕಿನಲ್ಲಿ ಸಹಕಾರ ಸಾಲ ಪಡೆದ ರೈತರಿಗಿಂತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಪಡೆದವರ ಸಂಖ್ಯೆ ಹೆಚ್ಚು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಬರದ ತೀವ್ರತೆ ಹೆಚ್ಚಿದ್ದು, ಹಾಸ್ಟೆಲ್ ಸೀಟಿಗೆ ಬೇಡಿಕೆ ಹೆಚ್ಚುತ್ತಿದೆ. ಬರದ ಹಿನ್ನೆಲೆಯಲ್ಲಿ ಸೀಟು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಚಂದ್ರಶೇಖರ್‌ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.