
ತುಮಕೂರು: ಜಗತ್ತಿನ 50 ಮಾಲಿನ್ಯ ಯುಕ್ತ ನಗರಗಳ ಸಾಲಿನಲ್ಲಿ 30 ನಗರಗಳು ಭಾರತದಲ್ಲಿವೆ. ಪ್ರಪಂಚದ ಶೇ 46ರಷ್ಟು ನದಿಗಳು ಮಲಿನಗೊಂಡಿವೆ. 1.6 ಮಿಲಿಯನ್ ಜನರು ಶುದ್ಧ ಗಾಳಿಯ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಪರಿಸರವಾದಿ ಸಿ.ಯತಿರಾಜು ಆತಂಕ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಗಾಂಧಿ ಸಹಜ ಬೇಸಾಯ ಆಶ್ರಮ, ಭಾರತೀಯ ವೈದ್ಯಕೀಯ ಸಂಘ, ಔಷಧಿ ವ್ಯಾಪಾರಿಗಳ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ‘ವಾಯುಗುಣ ವೈಪರೀತ್ಯ ಕೃಷಿ ಸವಾಲು, ಸಮಸ್ಯೆಗಳು’ ಹಾಗೂ ‘ವಾಯುಗುಣ ವೈಪರೀತ್ಯ ಮತ್ತು ಆರೋಗ್ಯ (ಸಿಓಪಿ-28) ಘೋಷಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹವಾಮಾನ ವೈಪರೀತ್ಯಕ್ಕೆ ತುತ್ತಾಗಿರುವ ದೇಶಗಳ ಪಟ್ಟಿಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಶೇ 70ರಷ್ಟು ಆರೋಗ್ಯ ಸೇವೆಗಳು ನಗರ ಕೇಂದ್ರಿತವಾಗಿವೆ. ಬಂಡವಾಳ ಶಾಹಿಗಳ ವ್ಯಾಪಾರಕ್ಕೆ ಅನುಕೂಲವಾಗುವಂತೆ ಪರಿಸರಕ್ಕೆ ಸಂಬಂಧಿತ ಕಾನೂನನ್ನು ದುರ್ಬಲಗೊಳಿಸಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಗಮನಿಟಿ ಕಾಪ್, (ಸಿಓಪಿ-28) ನಿರ್ಣಯಗಳಿಗೆ ಭಾರತ ಸಹಿ ಹಾಕಬೇಕು ಎಂದು ಒತ್ತಾಯಿಸಿದರು.
ಜಾಗೃತ ಕರ್ನಾಟಕದ ಡಾ.ಎಚ್.ವಿ.ವಾಸು, ‘ವಾಯುಗುಣ ವೈಪರೀತ್ಯ ಮತ್ತು ಆರೋಗ್ಯದ ಕುರಿತ ಸರ್ಕಾರಗಳ ನೀತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಬೇಕು. ಪರಿಸರ ಉಳಿಸುವ ವಾಗ್ದಾನ ರಾಜಕೀಯ ಪಕ್ಷಗಳ ಪ್ರಣಾಳಿಕೆ ಸೇರಬೇಕು. ಮರ ಕತ್ತರಿಸಿದರೆ ಜಿಡಿಪಿ ಹೆಚ್ಚುತ್ತದೆ ಎಂಬ ಲಾಭಕೋರತನದ ಲೆಕ್ಕಾಚಾರ ಹವಾಮಾನ ವೈಪರೀತ್ಯಕ್ಕೆ ಕಾರಣವಾಗಿದೆ’ ಎಂದು ಹೇಳಿದರು.
ಗಾಂಧಿ ಸಹಜ ಬೇಸಾಯ ಆಶ್ರಮದ ಮಂಜುನಾಥ್ ಮಾತನಾಡಿದರು. ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ.ಮಹೇಶ್, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎನ್.ಎಸ್.ಅನಂತ್, ಕಾರ್ಯದರ್ಶಿ ಎನ್.ಎಸ್.ಪಂಡಿತ್ ಜವಾಹರ್, ಮುಖಂಡರಾದ ಎನ್.ಎಸ್.ಸ್ವಾಮಿ, ರಾಮಕೃಷ್ಣಪ್ಪ, ರಂಗಸ್ವಾಮಿ, ಶಿವಲಿಂಗಯ್ಯ, ಗಂಗಾಧರ್, ಪ್ರತಾಪ್, ನಾಗರಾಜ್, ರವೀಶ್, ಕಿಶೋರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.