ADVERTISEMENT

ಪಾಲಿಕೆ ಸೌಲಭ್ಯ ಮರೀಚಿಕೆ: ನಿವಾಸಿಗಳ ಕನವರಿಕೆ

ಕೊಳಚೆ ನೀರು ನಿಂತು ದುರ್ನಾತ ಬೀರುವ ಚರಂಡಿಗಳು, ಪ್ರತಿನಿತ್ಯ ದೂಳು ಉಗುಳುವ ರಸ್ತೆಗಳು

ಹರಿಶ್ಚಂದ್ರ ನಾಯ್ಕ
Published 15 ಜನವರಿ 2018, 12:57 IST
Last Updated 15 ಜನವರಿ 2018, 12:57 IST
ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ ದೂಳು ಉಗುಳುತ್ತಿರುವ ರಸ್ತೆ
ರಸ್ತೆಯಲ್ಲಿ ವಾಹನಗಳು ಸಂಚರಿಸಿದಾಗ ದೂಳು ಉಗುಳುತ್ತಿರುವ ರಸ್ತೆ   

ತುಮಕೂರು: ನೈಮರ್ಲ್ಯದ ದೃಷ್ಟಿಯಿಂದ ಜನರು ಹಣ ಸಂಗ್ರಹಿಸಿ ಚರಂಡಿ ನಿರ್ಮಿಸಿದ್ದರು. ಚೆನ್ನಾಗಿದ್ದ  ಚರಂಡಿಯನ್ನು ಪಾಲಿಕೆ ಕಿತ್ತು ಹಾಕಿತು. ಅದೇ ಜಾಗದಲ್ಲಿ ಹೊಸದಾಗಿ ನಿರ್ಮಿಸಿದ ಚರಂಡಿಗಳು ಆರೇ ತಿಂಗಳಲ್ಲಿ ಕುಸಿಯತೊಡಗಿವೆ.

ಇದು ನಗರದ 2ನೇ ವಾರ್ಡಿನ ಹೊಂಬಯ್ಯನಪಾಳ್ಯದ ಪರಿಸ್ಥಿತಿ. ಶಿರಾ ಗೇಟ್‌ ವೃತ್ತದಿಂದ ಎಡಕ್ಕೆ ತೆರಳುವ ರಸ್ತೆಯಲ್ಲಿ ಸ್ವಲ್ಪವೇ ದೂರ ಸಾಗಿದರೆ  ನೂರಾರು ಕುಟುಂಬಗಳು ಅಚ್ಚುಕಟ್ಟಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ರಸ್ತೆ, ಚರಂಡಿ ಪರಿಸ್ಥಿತಿ ದೇವರಿಗೆ ಪ್ರೀತಿ ಎಂಬಂತಿದೆ.

ಚರಂಡಿಗಳಿದ್ದರೂ ನೀರು ಮುಂದೆ ಹೋಗುವುದಿಲ್ಲ. ಸೊಳ್ಳೆಗಳ ಕಾಟ. ಕಟ್ಟಿಕೊಂಡಿರುವ ಚರಂಡಿ ನೀರಿನ ವಾಸನೆ. ಜನರು ವಾಸಿಸುವ ಕಡೆಗಳಲ್ಲಿ ಡಾಂಬರೀಕರಣದ ರಸ್ತೆಗಳಿಲ್ಲ. ಆದರೆ ಈ ಬಡಾವಣೆಗಳಿಗೆ ಅಂಟಿಕೊಂಡಂತಿರುವ ಖಾಸಗಿ ಬಡಾವಣೆಗಳಲ್ಲಿ ಮನೆಗಳಿಲ್ಲದಿದ್ದರೂ ಡಾಂಬರೀಕರಣದ ರಸ್ತೆಗಳು. ‌

ADVERTISEMENT

‘ನಗರದ ಬಹುತೇಕ ಬಡಾವಣೆಗಳಲ್ಲಿ ಕಾಂಕ್ರಿಟ್‌ ರಸ್ತೆಗಳು ನಿರ್ಮಾಣವಾಗಿವೆ. ಆದರೆ ನಮಗೆ ಮಾತ್ರ ಈ ಭಾಗ್ಯ ಇಲ್ಲವಾಗಿದೆ. ರಸ್ತೆಯ ದೂಳು ಕುಡಿದು, ಕುಡಿದು ಎಲ್ಲರೂ ಅನಾರೋಗ್ಯಕ್ಕೀಡಾಗಿದ್ದಾರೆ’ ಎಂದು ನಿವಾಸಿ ಶಿವಕುಮಾರ್‌ ಹೇಳಿದರು.

ಕಾಂಕ್ರಿಟ್‌ ರಸ್ತೆ  ಸಾಧ್ಯವಾಗದಿದ್ದರೂ ಕನಿಷ್ಠ ಪಕ್ಷ ಡಾಂಬರು ರಸ್ತೆ ಮಾಡಿದರೆ ಸಾಕು ಎನ್ನುತ್ತಾರೆ  ದೇವರಾಜು.

‘ನಮ್ಮ ಬಡಾವಣೆಯಲ್ಲಿ ಮೊದಲು ಅಚ್ಚುಕಟ್ಟಾದ ಚರಂಡಿಯನ್ನು ನಾಗರಿಕರೇ ಮಾಡಿಕೊಂಡಿದ್ದೆವು. ಆದರೆ ಇದ್ದಕ್ಕಿದ್ದ ಹಾಗೆಯೇ ಪಾಲಿಕೆ ವತಿ
ಯಿಂದ ಉತ್ತಮ ಚರಂಡಿ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಬಂದ ಜನಪ್ರತಿನಿಧಿ ಮತ್ತು ಅಧಿಕಾರಿಗಳು ಮೊದಲಿದ್ದ ಚರಂಡಿಯನ್ನು ಕಿತ್ತು ಹಾಕಿದ್ದಾರೆ. ಗುಣಮಟ್ಟವಿಲ್ಲದ ಚರಂಡಿಯನ್ನು ಬಹಳ ಅವೈಜ್ಞಾನಿಕವಾಗಿ ನಿರ್ಮಿಸಿ ಹೋಗಿದ್ದಾರೆ. ಹೀಗಾಗಿ ಬಡಾವಣೆಯಲ್ಲಿ ಕೊಳಚೆ ನೀರು ನಿಂತುಕೊಳ್ಳುತ್ತಿದೆ’ ಎಂದು ನಿವಾಸಿ ಪುಷ್ಪಲತಾ ಆರೋಪಿಸುತ್ತಾರೆ.

ನಮ್ಮ ಮನೆ ರಸ್ತೆಯ ಪಕ್ಕವೇ ಇದೆ. ರಸ್ತೆಯು ಡಾಂಬರೀಕರಣ ಆಗದೇ ಇರುವುದರಿಂದ ವಾಹನಗಳು ಸಂಚರಿಸಿದಾಗ ರಸ್ತೆಯ ದೂಳು ಮನೆಯನ್ನು ತುಂಬಿಕೊಳ್ಳುತ್ತಿದೆ ಎನ್ನುತ್ತಾರೆ ಜಯಮ್ಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.