ADVERTISEMENT

ಬೇಡಿಕೆ ಈಡೇರಿಸದಿದ್ದರೆ ಧರಣಿ

ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:13 IST
Last Updated 26 ಜನವರಿ 2018, 10:13 IST
ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು ಮತ್ತು ನೌಕರರು
ಧರಣಿ ನಡೆಸಿದ ಸಂಘದ ಪದಾಧಿಕಾರಿಗಳು ಮತ್ತು ನೌಕರರು   

ತುಮಕೂರು: ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ ಸಂಯೋಜಿತ) ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಬ್ಬಂದಿ ಮತ್ತು ನೌಕರರು ಗುರುವಾರ ಕೆ.ಎಸ್.ಆರ್.ಟಿ.ಸಿ ಕೇಂದ್ರ ಬಸ್ ನಿಲ್ದಾಣದಲ್ಲಿರುವ ತುಮಕೂರು ವಿಭಾಗೀಯ ಕಚೇರಿ ಎದುರು ಪ್ರತಿಭಟನೆ ಮಾಡಿದರು.

ಯೂನಿಯನ್ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ಗಿರೀಶ್ ಮಾತನಾಡಿ,‘ ಎಐಟಿಯುಸಿ ನೇತೃತ್ವದಲ್ಲಿ ಹಲವಾರು ವರ್ಷಗಳಿಂದ ಹೋರಾಟ ಮಾಡಲಾ
ಗಿದೆ. ಕಾರ್ಮಿಕರಿಗೆ ಬರಬೇಕಾಗಿರುವ ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಘಟನೆ ಮುಂಚೂಣಿಯಲ್ಲಿದೆ. ನನೆಗುದಿಗೆ ಬಿದ್ದ ಬೇಡಿಕೆಗಳ ಈಡೇರಿಕೆಗೆ ಈಗ ಪ್ರತಿಭಟನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ತಕ್ಷಣ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸದೇ ಇದ್ದರೆ ಜನವರಿ 30ರಂದು ಅನಿರ್ಧಿಷ್ಟ ಧರಣಿ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

’ಈಚೆಗೆ ಸರ್ಕಾರ ಮತ್ತು ಆಡಳಿತ ಮಂಡಳಿ ಕಾರ್ಮಿಕರ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ನೋಟಿಸ್ ಕೊಡುವುದು, ಹಾಜರಾತಿಯನ್ನು ಗೈರು ಮಾಡುವುದು, ಕಾರ್ಮಿಕರ ವೇತನದಲ್ಲಿ ಕಡಿತ ಮಾಡಿದ ಜೀವ ವಿಮಾ ಮೊತ್ತವನ್ನು ಕಟ್ಟದೇ ಇರುವುದು, ಗ್ರ್ಯಾಚ್ಯುಟಿ ಹಣ ಕೊಡದೇ ಇರುವುದು, ನಿವೃತ್ತ ನೌಕರರಿಗೆ ಪಿಂಚಣಿ ಸೌಲಭ್ಯ ಒದಗಿಸುವುದು. ಮೆಡಿಕಲ್ ಬಿಲ್ ಪಾವತಿ ಮಾಡದೇ ಇರುವುದು ಸೇರಿ ಅನೇಕ ರೀತಿಯ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

’ರಜೆ ನಗದೀಕರಣ (ಲಿವ್ ಎನ್‌ಕ್ಯಾಶ್‌ಮೆಂಟ್‌) ಕೊಡದೇ ಸತಾಯಿಸುವುದು, ಭವಿಷ್ಯ ನಿಧಿ ನೀಡದೇ ಇರುವುದು, ಅಕ್ರಮವಾಗಿ ವರ್ಗಾವಣೆ ಮಾಡುವುದು ಸೇರಿ ಕಾರ್ಮಿಕರನ್ನು ಶೋಷಣೆಗೀಡು ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

‘ಸಾರಿಗೆ ನೌಕರರು ನಿರಂತರವಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡಿದ್ದಾರೆ. ನ್ಯಾಯಯುತ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದವರ ಮೇಲೆ ಆರೋಪಗಳನ್ನು ಹೊರಿಸಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ನೌಕರರ ಮೇಲೆ ದೂರು ದಾಖಲು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನೌಕರರು ಮೊಕ್ಕದ್ದಮೆ ನಡೆಸಬೇಕಾದರೆ ತಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾಗಿದೆ. 14 ವರ್ಷಗಳಿಂದಲೂ ಇದೇ ರೀತಿ ನಡೆದುಕೊಂಡು ಬಂದಿದೆ. ಕ್ರಿಮಿನಲ್ ಕೋರ್ಟ್ ನಮ್ಮ ಕಾರ್ಮಿಕರ ಪರವಾಗಿ ತೀರ್ಪನ್ನು ಕೊಟ್ಟಿದೆ. ಆದರೆ, ಮಂಡಳಿ ಅಥವಾ ಸರ್ಕಾರ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.

ಈ ದಿನ ಪ್ರತಿಭಟನೆ ಮಾಡಲು ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯಲಾಗಿದೆ. ಆದಾಗ್ಯೂ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ಆಡಳಿತ ವರ್ಗ ಪೊಲೀಸರಿಗೆ ಇಲ್ಲಿ ಪ್ರತಿಭಟನೆ ಮಾಡಲು ಬಿಡಬೇಡಿ ಎಂದು ಒತ್ತಡ ಹಾಕಿದೆ ಎಂದು ಆರೋಪಿಸಿದರು.

ನ್ಯಾಯಯುತ ಬೇಡಿಕೆಗಳ ಈಡೇರಿಸಲು ಕೋರಿ ಇಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಸಾರ್ವಜನಿಕ ಆಸ್ತಿ ಹಾಳು ಮಾಡಲು ಇಲ್ಲಿ ಪ್ರತಿಭ
ಟನೆ ಮಾಡುತ್ತಿಲ್ಲ. ಆದ್ದರಿಂದ ನ್ಯಾಯಯುತವಾಗಿ ಬರಬೇಕಾದ ಸವಲತ್ತುಗಳನ್ನು ಕೊಡಬೇಕು ಎಂದು ಒತ್ತಾಯ ಮಾಡಿದರು.

ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಕಂಬೇಗೌಡ ಮಾತನಾಡಿ,‘ ಈ ಪ್ರತಿಭಟನೆಗೆ ನಮ್ಮ ಸಂಘಟನೆ ಸಂಪೂರ್ಣವಾಗಿ ಬೆಂಬಲಿಸುತ್ತದೆ. ಕುಡಿಯುವ ನೀರಿಗಾಗಿ ನಡೆಯುತ್ತಿರುವ ಮಹದಾಯಿ ಹೋರಾಟಕ್ಕೂ ನಮ್ಮ ಪಕ್ಷ ಹಾಗೂ ಸಂಘಟನೆ ಸಂಪೂರ್ಣ ಬೆಂಬಲ ನೀಡಿದೆ ಎಂದರು.

ಯೂನಿಯನ್ ಜಿಲ್ಲಾ ಘಟಕ ಅಧ್ಯಕ್ಷ ಅಪ್ಸರ್ ಪಾಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಸಿಪಿಐ ಜಿಲ್ಲಾ ಮುಖಂಡ ಕಾಂತರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.