ADVERTISEMENT

ಬಡವರಿಗೆ ಮನೆ ಇನ್ನೂ ದೂರ...

ದಿಬ್ಬೂರಿನಲ್ಲಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಾಣಗೊಂಡಿರುವ 1200 ಮನೆಗಳ ವಸತಿ ಸಮುಚ್ಛಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:18 IST
Last Updated 26 ಜನವರಿ 2018, 10:18 IST
ವಸತಿ ಸಮುಚ್ಛಯದ ನೋಟ
ವಸತಿ ಸಮುಚ್ಛಯದ ನೋಟ   

ತುಮಕೂರು: ನಗರದ ಹೊರವಲಯದ ದಿಬ್ಬೂರಿನಲ್ಲಿ ರಾಜೀವ್ ಆವಾಸ್ ಯೋಜನೆಯಡಿ ಕೊಳೆಗೇರಿ ಮುಕ್ತ ನಗರ ಧ್ಯೇಯದಡಿ ನಿರ್ಮಾಣ ಮಾಡಲಾದ 1,200 ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ.

ಆಗಸ್ಟ್ ತಿಂಗಳಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದ್ದರು. ಫಲಾನುಭವಿಗಳು ಚಾತಕ ಪಕ್ಷಿಯಂತೆ ಮನೆಗಳಿಗಾಗಿ ಕಾದುಕುಳಿತಿದ್ದಾರೆ. ಹಸಿದವರ ಮುಂದೆ ಅನ್ನದ ತಟ್ಟೆ ಇಟ್ಟು ಊಟ ಮಾತ್ರ ಕೊಡದ ಪರಿಸ್ಥಿತಿ ತಮ್ಮದಾಗಿದೆ ಎಂದು ಸೂರಿಗಾಗಿ ದಶಕಗಳ ಕಾಲ ಹೋರಾಟ ಮಾಡಿದ ಫಲಾನುಭವಿಗಳು ಹೇಳುತ್ತಾರೆ.

1,200 ಮನೆಗಳಲ್ಲಿ  ಈ ಮೊದಲೇ 70 ಮನೆಗಳನ್ನು ಕೊಳೆಗೇರಿ ನಿವಾಸಿಗಳಿಗೆ ಹಾಗೂ 1 ಮನೆ ಲೈಂಗಿಕ ದೌರ್ಜನ್ಯಕ್ಕೀಡಾದ ಮಹಿಳೆಯೊಬ್ಬರಿಗೆ ಹಂಚಿಕೆ ಮಾಡಿರುವುದು ಸೇರಿ ಒಟ್ಟು 71 ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಮನೆ ಪಡೆದವರು ಈಗಾಗಲೇ ಅಲ್ಲಿ ಕೆಲವರು ವಾಸಿಸುತ್ತಿದ್ದಾರೆ.

ADVERTISEMENT

ಇನ್ನುಳಿದಂತೆ 1,129 ಮನೆಗಳು ಹಾಗೆಯೇ ಇವೆ. ರಾಜ್ಯದಲ್ಲಿಯೇ ಅತ್ಯಂತ ವಿನೂತನ ರೀತಿಯಲ್ಲಿ ಮತ್ತು ಒಂದೇ ಕಡೆ ಬಡವರಿಗಾಗಿ ನಿರ್ಮಾಣಗೊಂಡ ವಸತಿ ಸಮುಚ್ಛಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಈ ವಸತಿ ಸಮುಚ್ಛಯ ಈಗ ಕಾಂಕ್ರೀಟ್ ಕಾಡಿನಂತೆ ಗೋಚರಿಸಿದೆ.

’ದುಷ್ಕರ್ಮಿಗಳು ಕೆಲ ಮನೆಗಳಲ್ಲಿನ ಫ್ಯಾನ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ವಿದ್ಯುತ್ ಬಲ್ಬ್‌ಗಳನ್ನು ಬಿಟ್ಟಿಲ್ಲ. ನಗರದಲ್ಲಿರುವ ಮನೆಗಳನ್ನೇ ದುಷ್ಕರ್ಮಿಗಳು, ಕಳ್ಳರು ಬಿಡುವುದಿಲ್ಲ. ಕಳ್ಳತನ ಮಾಡುತ್ತಾರೆ. ಇನ್ನು ಊರ ಹೊರಗಿನ ವಸತಿ ಸಮುಚ್ಛಯಗಳನ್ನು ಬಿಡುತ್ತಾರೆಯೇ? ಆದಷ್ಟು ಬೇಗ ಮನೆಗಳನ್ನು ಹಂಚಿಕೆ ಮಾಡಿದರೆ ಮನೆಗಳನ್ನು ನಿರ್ಮಿಸಿದ್ದಕ್ಕೂ ಸಾರ್ಥಕವಾಗುತ್ತದೆ’ ಎಂದು ಫಲಾನುಭವಿಗಳು ಸಮಸ್ಯೆ ವಿವರಿಸುತ್ತಾರೆ.

ಜನರು ವಾಸಿಸದೇ ಇರುವುದರಿಂದ ಹಾಳು ಸುರಿಯುತ್ತಿವೆ. ನಿರ್ವಹಣೆ ಇಲ್ಲದೇ ಇರುವುದು, ಕಾಂಪೌಂಡ್ ಇಲ್ಲದೇ ಇರುವುದು ಈ ಮನೆಗಳಲ್ಲಿ ವಾಸಿಸುವ ಕನಸು ಹೊತ್ತ ಫಲಾನುಭವಿಗಳಿಗೆ ಆತಂಕ ಸೃಷ್ಟಿಸಿದೆ.

ಮನೆಗಳನ್ನು ನಿರ್ಮಿಸಿ ಹಾಗೆಯೇ ಬಿಡಲಾಗಿದೆ. ನಮಗೆ ಹಂಚಿಕೆ ಮಾಡುವಷ್ಟರಲ್ಲಿ ಆ ಮನೆಗಳು ಏನಾಗಿರುತ್ತವೊ ಎಂಬ ಆತಂಕ ಕಾಡುತ್ತಿದೆ ಎಂದು ಮನೆ ನಿರೀಕ್ಷೆಯಲ್ಲಿರುವ ಫಲಾನುಭವಿಗಳು ಆತಂತಕ ವ್ಯಕ್ತಪಡಿಸುತ್ತಿದ್ದಾರೆ.

ಈಚೆಗೆ, ಫಲಾನುಭವಿಗಳ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ನಡೆಸಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ 461 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವ ಪಟ್ಟಿ ಅಂತಿಮಗೊಳಿಸಲಾಗಿದೆ. ಆದರೆ, ಮನೆಗಳನ್ನು ಮಾತ್ರ ಹಂಚಿಕೆ ಮಾಡಿಲ್ಲ. ಅದೇ ರೀತಿ ವಿಶಿಷ್ಟ ಮಾನದಂಡದಡಿ ಕುಶಲಕರ್ಮಿಗಳು, ಲೈಂಗಿಕ ಅಲ್ಪಸಂಖ್ಯಾತರು, ಆಟೊ ಚಾಲಕರು, ವ್ಯಾಪಾರಸ್ಥರು ಮತ್ತು ಬಾಡಿಗೆದಾರರಿಗೆ ಆದ್ಯತೆ
ಅನುಸಾರ ನೀಡಬೇಕಾದ 739 ಮನೆಗಳ ಹಂಚಿಕೆ ಬಗ್ಗೆಯೂ ತೀರ್ಮಾನವಾಗಿದೆ. ಆದರೆ, ಮನೆ ಹಂಚಿಕೆ ಮಾಡಿಲ್ಲ ಎಂದು ಫಲಾನುಭವಿಗಳು ದೂರುತ್ತಿದ್ದಾರೆ.
***
ಮನೆ ಹಂಚಿಕೆಯಲ್ಲಿ ನಮ್ಮ ಪಾತ್ರ ಇಲ್ಲ

‘ಲಭಿಸಿದ ಅನುದಾನದಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡುವುದಷ್ಟೇ ನಿಗಮದ ಕೆಲಸ. ಫಲಾನುಭವಿಗಳನ್ನು ಗುರುತಿಸಿ ಮನೆಗಳನ್ನು ಹಂಚಿಕೆ ಮಾಡುವಲ್ಲಿ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಅಂತಿಮ ಪಟ್ಟಿ ಸಿದ್ಧಪಿಡಿಸಿ ಮನೆ ಹಂಚಿಕೆ ಮಾಡುತ್ತವೆ. ಮನೆ ಹಂಚಿಕೆಯಲ್ಲಿ ನಿಗಮದ ಪಾತ್ರವೇನೂ ಇಲ್ಲ’ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಷಣ್ಮುಖಪ್ಪ ಹೇಳಿದರು.
***
ಫೆಬ್ರುವರಿಯೊಳಗೆ ಮನೆ ಹಂಚಲಿ

'2014ರಲ್ಲಿಯೇ ಮನೆಗಳ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡಲಾಯಿತು. ಕಾಮಗಾರಿಯನ್ನು 18 ತಿಂಗಳಲ್ಲಿ ಪೂರ್ಣಗೊಳಿಸಬೇಕಿತ್ತು. ಆ ಪ್ರಕಾರ 2016ರಲ್ಲಿ ಮನೆಗಳು ಪೂರ್ಣವಾಗಬೇಕಿತ್ತು. ಆದರೆ, ಒಂದುವರೆ ವರ್ಷದ ಹಿಂದೆ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ವಿಳಂಬ ಆಯಿತು. 2017ರಲ್ಲಿ ನಿರ್ಮಾಣ ಪೂರ್ಣವಾಯಿತು. ಡಿಸೆಂಬರ್ ತಿಂಗಳಲ್ಲೇ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಈವರೆಗೂ ಆಗಿಲ್ಲ' ಎಂದು ಸ್ಲಂ ಜನಾಂದೋಲನ ಸಂಘಟನೆ ಅಧ್ಯಕ್ಷ ಎ.ನರಸಿಂಹಮೂರ್ತಿ 'ಪ್ರಜಾವಾಣಿ'ಗೆ ತಿಳಿಸಿದರು.

'ಈಗ ಚುನಾವಣೆ ದಿನಾಂಕ ಘೋಷಣೆಯಾದರೆ ಆಡಳಿತ ಯಂತ್ರ ಅದರಲ್ಲಿಯೇ ಮಗ್ನವಾಗುತ್ತದೆ. ಮನೆ ಹಂಚಿಕೆ ಇನ್ನಷ್ಟು ವಿಳಂಬವಾಗುತ್ತದೆ. ಹೀಗಾಗಿ, ಫೆಬ್ರುವರಿ ತಿಂಗಳಲ್ಲಿಯೇ ಜಿಲ್ಲಾಡಳಿತ, ಶಾಸಕರು, ಮಹಾನಗರ ಪಾಲಿಕೆ ಮನೆ ಹಂಚಿಕೆ ಮಾಡಬೇಕು. ಈ ಕುರಿತು ಜ.28ರಂದು ಫಲಾನುಭವಿಗಳ ಬಹಿರಂಗ ಸಭೆ ನಡೆಸಲಾಗುತ್ತಿದೆ' ಎಂದು ನರಸಿಂಹಮೂರ್ತಿ ತಿಳಿಸಿದರು.
***
ಚುನಾವಣೆ ಉದ್ದೇಶ

'ನಗರದಲ್ಲಿ 1200 ಮನೆಗಳನ್ನು ನಿರ್ಮಾಣ ಮಾಡಿದರೂ ಫಲಾನುಭವಿಗಳಿಗೆ ಹಂಚದೇ ಹಾಗೆಯೇ ಬಿಟ್ಟಿರುವುದರ ಹಿಂದೆ ರಾಜಕಾರಣ ಅಡಗಿದೆ. ಶಾಸಕರು ವಿಧಾನ ಸಭಾ ಚುನಾವಣೆಯ ಉದ್ದೇಶದಿಂದ ಮತದಾರರ ಗಮನ ಸೆಳೆಯಲು ವಿನಾಕಾರಣ ಮನೆ ಹಂಚಿಕೆ ವಿಳಂಬ ಮಾಡುತ್ತಿದ್ದಾರೆ' ಎಂದು ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬಾಬಾ ದೂರಿದ್ದಾರೆ.
***
ಶಿವರಾತ್ರಿಗೆ ನೀಡುತ್ತೇವೆ

ಮನೆ ಹಂಚಿಕೆ ಕುರಿತು ಜಿಲ್ಲಾಧಿಕಾರಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. 15 ದಿನದಲ್ಲಿ ಅಂತಿಮ ಪಟ್ಟಿ ಪೂರ್ಣವಾಗಲಿದೆ. ಶಿವರಾತ್ರಿ ಹೊತ್ತಿಗೆ ಸಂಬಂಧಪಟ್ಟ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಡಾ.ರಫೀಕ್ ಅಹಮದ್  ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.