ADVERTISEMENT

ಊಟಕ್ಕೆ ಮುಗಿಬಿದ್ದರು

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 7:11 IST
Last Updated 2 ಫೆಬ್ರುವರಿ 2018, 7:11 IST

ತುಮಕೂರು: ಸಾಹಿತ್ಯದ ಸವಿಯನ್ನು ಸವಿಯಲು ಬಂದಿದ್ದ ಸಾಹಿತ್ಯಾಸಕ್ತರು ಊಟದ ಸಮಯದಲ್ಲಿ ತಾ ಮುಂದು, ತಾ ಮುಂದು ಎಂದು ಮುಗಿಬಿದ್ದ ದೃಶ್ಯ ಕಂಡು ಬಂದಿತು.

ಗಾಜಿನಮನೆಯ ಪಕ್ಕದಲ್ಲಿಯೇ ತುಂಬಾ ಕಿರಿದಾದ ಜಾಗದಲ್ಲಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಉದ್ಘಾಟನಾ ಸಮಾರಂಭ ಮುಗಿಯುವ ಮುನ್ನವೇ ಸಭೆಯಲ್ಲಿ ನೆರೆದಿದ್ದ ಸಾವಿರಾರು ಮಂದಿ ಒಂದೇ ಬಾರಿ ಊಟಕ್ಕೆಂದು ನಿಗದಿ ಮಾಡಿದ್ದ ಜಾಗಕ್ಕೆ ನುಗ್ಗಿದರು. ಸೇರಿದ್ದ ಸಾವಿರಾರು ಜನರಿಗೋಸ್ಕರ ಮೊಸರನ್ನ, ಬಿಸಿ ಬೇಳೆಬಾತ್‌, ಮೆಣಸಿನಕಾಯಿ ಬಜ್ಜಿ ಮತ್ತು ಮೈಸೂರು ಪಾಕ್‌ಗಳನ್ನು ಸಿದ್ಧಪಡಿಸಲಾಗಿತ್ತು.

ಶಾಲೆ, ಕಾಲೇಜುಗಳ ಮಕ್ಕಳು, ಶಿಕ್ಷಕರೇ ಹೆಚ್ಚಾಗಿ ಭಾಗವಹಿಸಿದ್ದರೂ ಕೂಡ ಊಟದ ಸಮಯದಲ್ಲಿ ಕೂಗಾಟ, ಚೀರಾಟ ಜೋರಾಗಿತ್ತು. ಊಟಕ್ಕಾಗಿ ನುಗ್ಗುತ್ತಿದ್ದವರನ್ನು ನಿಯಂತ್ರಣ ಮಾಡಲು ಸಂಘಟಕರು, ಊಟ ಬಡಿಸುವವರು ಮತ್ತು ಪೋಲಿಸರು ಹರಸಾಹಸ ಪಡುವಂತಾಯಿತು.

ADVERTISEMENT

ಸಮ್ಮೇಳನಕ್ಕೆ ಕಾಡಿದ ಸಾಹಿತ್ಯಾಸಕ್ತರ ಕೊರತೆ

ನಗರದಲ್ಲಿ ನಡೆಯುತ್ತಿರುವ 13ನೇ ಸಾಹಿತ್ಯ ಸಮ್ಮೇಳನದ ವ್ಯವಸ್ಥೆ ಮತ್ತು ಸಂಘಟನೆ ಬಹಳ ಅಚ್ಚುಕಟ್ಟಾಗಿಯೇ ಇತ್ತಾದರೂ, ಸಾಹಿತ್ಯಾಸಕ್ತರ ಕೊರತೆ ಸಮ್ಮೇಳನದಲ್ಲಿ ಎದ್ದು ಕಾಣಿಸಿತು.

‘ಈ ಬಾರಿ ಜಿಲ್ಲಾ ಕೇಂದ್ರದಲ್ಲಿಯೇ ಸಮ್ಮೇಳನ ನಡೆಯುತ್ತಿರುವುದರಿಂದ ಸುಮಾರು 5 ಸಾವಿರ ಮಂದಿಯಾದರೂ ಭಾಗವಹಿಸಬಹುದು ಎಂದು ತಿಳಿದಿದ್ದೇವು. ಆದರೆ ಇಲ್ಲಿ ತಾಲ್ಲೂಕು ಸಮ್ಮೇಳನಗಳಲ್ಲಿ ಸೇರುವಷ್ಟು ಜನರೂ ಸೇರಿಲ್ಲ’ ಎಂದು ಸೇರಿದ್ದ ಸಾಹಿತ್ಯಾಸಕ್ತರು ಅವರವರಲ್ಲಿಯೇ ಮಾತನಾಡಿಕೊಂಡರು.

ಉದ್ಘಾಟನಾ ಸಮಾರಂಭ ಆರಂಭವಾಗುತ್ತಿದ್ದಂತೆ ವೇದಿಕೆಯ ಮುಂಭಾಗದ ಖುರ್ಚಿಗಳು ತುಂಬಿದಂತೆ ಕಂಡರೂ ಕೆಲವೇ ಕ್ಷಣಗಳಲ್ಲಿ, ಸಮ್ಮೇಳನಾಧ್ಯಕ್ಷರು ಮಾತನಾಡುವ ಹೊತ್ತಿಗೆ ಅರ್ಧಕ್ಕಿಂತ ಹೆಚ್ಚು ಖುರ್ಚಿಗಳು ಖಾಲಿಯಾಗಿದ್ದವು. ಇನ್ನೂ ಜಿಲ್ಲಾ ಉಸ್ತುವಾರಿ ಸಚಿವರಂತೂ ಹೆಚ್ಚು ಕಡಿಮೆ ಖಾಲಿ ಖುರ್ಚಿಗಳಿಗೆ ಭಾಷಣ ಮಾಡಿದರು.

ಗಾಜಿನಮನೆಯಲ್ಲಿ ಬೀಸಿಲಿನ ತಾಪ ಜಾಸ್ತಿ ಇದ್ದುದರಿಂದ ಸೇರಿದಸ್ದ ಜನರು ಪುಸ್ತಕ ಮಳಿಗೆಗಳ ಎದುರು, ಚಿತ್ರಕಲಾ ಪ್ರದರ್ಶನ ಮಳಿಗೆಗಳ ಮುಂಭಾಗ ಮತ್ತು ಊಟಕ್ಕೆ ಹಾಕಿದ್ದ ಶಾಮಿಯಾನದ ಕಡೆಯೇ ಹೆಚ್ಚು ಕಾಣಿಸಿಕೊಂಡರು.

ಸಮ್ಮೇಳನಕ್ಕೆ ಜನ ಸೇರಲಿ ಎನ್ನುವ ದೃಷ್ಟಿಯಿಂದ ಶಿಕ್ಷಕರಿಗೆ ಒಒಡಿ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿತ್ತು. ಆದರೆ ಒಂದು ಶಾಲೆಯಿಂದ ಒಬ್ಬ, ಇಬ್ಬರು ಶಿಕ್ಷಕರು ಮಾತ್ರ ಹಾಜರಾಗಿದ್ದರು. ಸಮ್ಮೇಳನವು ಶನಿವಾರ ಮತ್ತು ಭಾನುವಾರದಂಥ ರಜಾದಿನಗಳಲ್ಲಿ ನಡೆದಿದ್ದರೆ ಇನ್ನೂ ಹೆಚ್ಚು ಸಾರ್ವಜನಿಕರು ಸೇರುತ್ತಿದ್ದರು. ಕೆಲವರಿಗೆ ಭಾಗವಹಿಸುವ ಇಚ್ಛೆಯಿದ್ದರೂ, ಕೆಲಸಕ್ಕೆ ರಜೆ ಇಲ್ಲದೇ ಇರುವುದರಿಂದ ಇಂತಹವರು ಬರಲು ಆಗಿಲ್ಲ ಎಂದು ಕೆಲವರು ಮಾತನಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.