ADVERTISEMENT

ಉಪಲೋಕಾಯುಕ್ತರೆದುರು ದೂರುಗಳ ಮಳೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 7:13 IST
Last Updated 8 ಫೆಬ್ರುವರಿ 2018, 7:13 IST
ಉಪಲೋಕಾಯುಕ್ತರು ಜಿಲ್ಲಾ ಪಂಚಾಯಿತಿ ಸಿಇಒ ಅನಿಸ್ ಕಣ್ಮಣಿ ಜಾಯ್ ಅವರಿಗೆ ಸೂಚಿಸುತ್ತಿರುವುದು
ಉಪಲೋಕಾಯುಕ್ತರು ಜಿಲ್ಲಾ ಪಂಚಾಯಿತಿ ಸಿಇಒ ಅನಿಸ್ ಕಣ್ಮಣಿ ಜಾಯ್ ಅವರಿಗೆ ಸೂಚಿಸುತ್ತಿರುವುದು   

ತುಮಕೂರು: ದಲಿತರ ಸ್ಮಶಾನ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಿದ್ದರೂ ಬಳಕೆ ಮಾಡಿಕೊಂಡಿಲ್ಲ. ವಸತಿ ಯೋಜನೆಯಡಿ ಪಂಚಾಯಿತಿ ಅಧ್ಯಕ್ಷರೇ ಪಟ್ಟಿಯಿಂದ ಅರ್ಹರನ್ನು ಕೈ ಬಿಟ್ಟಿದ್ದಾರೆ. 60 ವರ್ಷಗಳ ಹಿಂದೆಯೇ ದಾನಿಯೊಬ್ಬರು ಸರ್ಕಾರಿ ಶಾಲೆಗೆ 18 ಎಕರೆ ಜಮೀನು ಕೊಟ್ಟರೂ ಶಿಕ್ಷಣ ಇಲಾಖೆ ದಾಖಲೀಕರಣ ಮಾಡಿಕೊಂಡಿಲ್ಲ.

ಇಂಥ ಹಲವು ದೂರುಗಳ ವಿಚಾರಣೆಯನ್ನು ಬುಧವಾರ ನಗರದಲ್ಲಿ ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ವಿಚಾರಣೆ ನಡೆಸಿದರು.ನೂರಕ್ಕೂ ಅಧಿಕ ದೂರುದಾರರು ಹಾಜರಾಗಿದ್ದರು. ಸಭಾಂಗಣದಲ್ಲಿ ಕೂರಲು ಆಸನವಿಲ್ಲದೆ ಪರದಾಡಿದರು. ಇದನ್ನು ನೋಡಿದ ಅಡಿ, ‘ಆಸನದ ವ್ಯವಸ್ಥೆ ಮಾಡುವಂತೆ’  ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದರು.

ಮಧುಗಿರಿ ತಾಲ್ಲೂಕಿನ ಸಿದ್ಧಪ್ಪ ಅವರು 4 ಎಕರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣವನ್ನು ಮೊದಲು ವಿಚಾರಣೆ ನಡೆಸಿದರು. ಒತ್ತುವರಿಯನ್ನು ಅರಣ್ಯ ಇಲಾಖೆಗೆ ಅಧಿಕಾರಿಗಳು ಬಲವಾಗಿ ಸಮರ್ಥಿಸಿದರು. ಹಲವು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಕಾರಣ ಸಿದ್ಧಪ್ಪ ಅವರಿಗೆ ಪರ್ಯಾಯ ಭೂಮಿ ನೀಡುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದರು.

ADVERTISEMENT

ಮಧುಗಿರಿಯಲ್ಲಿ ನಂಜುಂಡರಾಜು ಎಂಬುವರು ಗೋಮಾಳ, ಅರಣ್ಯ ಇಲಾಖೆಗೆ ಸೇರಿದ ಜಮೀನು ಒತ್ತುವರಿ ಮಾಡಿ ನಿವೇಶನ ಮಾಡುತ್ತಿರುವ ದೂರಿಗೆ ಸಂಬಂದಿಸಿದಂತೆ ’ಕಂದಾಯ, ಅರಣ್ಯ ಇಲಾಖೆ ಜಂಟಿಯಾಗಿ ಸರ್ವೆ ಮಾಡಬೇಕು. ಸರ್ಕಾರಿ ಭೂಮಿ ರಕ್ಷಣೆ ಮಾಡಬೇಕು. ಒತ್ತುವರಿ ಕುರಿತು ದೂರು ಬಂದರೂ ಸುಮ್ಮನೆ ಯಾಕಿದ್ದೀರಿ’ ಅಧಿಕಾರಿಗಳನ್ನು  ಪ್ರಶ್ನಿಸಿದರು.

’ಮೂರು ತಿಂಗಳಲ್ಲಿ ಸರ್ವೆ ನಡೆಸಿ ವರದಿ ಕೊಡಬೇಕು. ಇಲ್ಲದೇ ಇದ್ದರೆ ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ದಾಖಲಾಗುತ್ತದೆ’ ಎಂದು ಜಿಲ್ಲಾ ಅರಣ್ಯಾಧಿಕಾರಿ ರಾಮೇಗೌಡ ಅವರಿಗೆ ಎಚ್ಚರಿಕೆ ನೀಡಿದರು.

ಮಧುಗಿರಿ ತಾಲ್ಲೂಕು ರೆಡ್ಡಿಹಳ್ಳಿಯ ರಾಮಚಂದ್ರಯ್ಯ ಅವರ ದೂರು ಉಪಲೋಕಾಯುಕ್ತರಿಗೆ ಕುತೂಹಲವನ್ನುಂಟು ಮಾಡಿತು. ’ಸ್ವಾಮಿ ವೀರಭದ್ರಯ್ಯ ಎಂಬ ದಾನಿಗಳು 1961ರಲ್ಲೇ ಸರ್ಕಾರಿ ಶಾಲೆಗೆ 18 ಎಕರೆ ಜಮೀನು ದಾನ ಕೊಟ್ಟಿದ್ದಾರೆ. ಶಿಕ್ಷಣ ಇಲಾಖೆ, ತಹಶೀಲ್ದಾರ್‌ ಕಚೇರಿಯಾಗಲಿ ಸರ್ಕಾರಿ ಆಸ್ತಿಯಾಗಿ ದಾಖಲಾತಿ ಮಾಡಿ ಕೊಂಡಿಲ್ಲ. ಈಗ ಅವರ ವಂಶಸ್ಥರು, ಸಾರ್ವಜನಿಕರು ಜಮೀನಿನ ಮೇಲೆ ಕಣ್ಣು ಹಾಕಿದ್ದಾರೆ’ ಎಂದು ವಿವರಣೆ ನೀಡಿದರು.

ಉಪನೋಂದಣಿ ಅಧಿಕಾರಿ, ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ವಿವರಣೆ ಪಡೆದ ಬಳಿಕ ಮಾತನಾಡಿದ ಉಪಲೋಕಾಯುಕ್ತರು,‘ ಯಾರೇ ಆಗಲಿ ಒಮ್ಮೆ ದಾನಕೊಟ್ಟ ಮೇಲೆ ದಾನವೇ ಆಗಿರುತ್ತದೆ. ದಾನಕೊಟ್ಟ ವಂಶಸ್ಥರಾಗಲಿ, ಯಾರೇ ಆಗಲಿ ಅದರ ಮೇಲೆ ಹಕ್ಕು ಸಾಧಿಸಲು ಬರುವುದಿಲ್ಲ’ ಎಂದು ಹೇಳಿದರು.

ಸಾರ್ವಜನಿಕರೊಬ್ಬರು ಉದಾ ರವಾಗಿ ನೀಡಿದ ದಾನವನ್ನು ಉಳಿಸಿಕೊ ಳ್ಳಲು ಇಷ್ಟೊಂದು ನಿರ್ಲಕ್ಷ್ಯವಹಿಸಿದರೆ ಹೇಗೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.  ಎರಡು ತಿಂಗಳಲ್ಲಿ ದಾಖಲೀಕರಣ ಮಾಡಿ ವರದಿ ಸಲ್ಲಿಸಬೇಕು ಎಂದು ಆದೇಶಿಸಿದರು.

ಬ್ಯಾಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಲಿತ ಸ್ಮಶಾನ ಅಭಿವೃದ್ಧಿಗೆ ಹಣ ಬಂದರೂ ಅಂದಿನ ತಹಶೀಲ್ದಾರ ರಮೇಶ್ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯವಹಿಸಿದರು. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರುದಾರ ಎಚ್.ಆರ್.ನಾಗಭೂಷಣ ಮನವಿ ಮಾಡಿದರು.

‘ಅನುದಾನ ಬಂದರೆ ಯಾಕೆ ಬಳಕೆ ಮಾಡಲಿಲ್ಲ ಎಂದು ಹಾಜರಿದ್ದ ಅಂದಿನ ತಹಶೀಲ್ದಾರ್ ರಮೇಶ್ ಅವರನ್ನು ಪ್ರಶ್ನಿಸಿದರು. ಈ ತರಹ ಕಾಲಹರಣ ಮಾಡುವುದರಿಂದ ಏನು ಪ್ರಯೋಜನ ಬರುತ್ತದೆ. ಈ ರೀತಿ ಮಾಡಬಾರದು’ ಎಂದು ಸೂಚಿಸಿದರು.

ಮರಳುಗಾರಿಕೆ ನಿಲ್ಲಿಸಿ: ಮಧುಗಿರಿ ಸಮೀಪ ಕೋಡಿಗೇನಹಲ್ಲಿ ಹತ್ತಿರ ಜಯಮಂಗಲಿ, ಶಿಂಷಾ ನದಿಗಳಲ್ಲಿ ಅಕ್ರಮವಾಗಿ ಮರುಳು ತೆಗೆಯುವುದು, ದಾಸ್ತಾನು ಮಾಡುವುದು, ಸಾಗಾಣಿಕೆ ವ್ಯಾಪಕವಾಗಿದೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ದೂರುದಾರ ಸಿದ್ದಲಿಂಗಯ್ಯ ಮನವಿ ಮಾಡಿದರು.

ಮಧುಗಿರಿ ತಾಲ್ಲೂಕು ಹಿಂದಿನ ತಹಶೀಲ್ದಾರ ಅನಂತರಾಮು ಹಾಗೂ ಈಗಿನ ತಹಶೀಲ್ದಾರರು, ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ಮರಳು ಅಕ್ರಮವಾಗಿ ಸಾಗಿಸುವ ಟ್ರ್ಯಾಕ್ಟರ್ ಲಾರಿಗಳನ್ನು ತೆಡದು ಕ್ರಮ ಜರುಗಿಸಲಾಗಿದೆ. ದಾಸ್ತಾನು ಪ್ರಕರಣಗಳಿಲ್ಲ ಎಂದು ಹೇಳಿದರು.

ಈ ಬಗ್ಗೆ ಸಿ.ಡಿ ನನ್ನ ಬಳಿ ಇದೆ. ಪರಿಶೀಲಿಸಬಹುದು ಎಂದು ದೂರುದಾರರು ಹೇಳಿದರು. ಪ್ರಕರಣ ಗಂಭೀರವಾದುದು. ಹೀಗಾಗಿ, ಗಣಿ ಮತ್ತು ಭೂ ವಿಜ್ಞಾನ ಉಪನಿರ್ದೇಶಕರು, ತಹಶೀಲ್ದಾರರು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿ ವರದಿ ಕೊಡಬೇಕು ಎಂದು ಉಪ ಲೋಕಾಯುಕ್ತರು ಆದೇಶಿಸಿದರು.

ರಾತ್ರಿಯವರೆಗೂ ದೂರುಗಳ ವಿಚಾರಣೆ ನಡೆಸಲಾಯಿತು. ಜಿಲ್ಲಾಧಿ ಕಾರಿ ಕೆ.ಪಿ.ಮೋಹನ್‌ರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಅನಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್, ತುಮಕೂರು ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ಮಧುಗಿರಿ ಉಪವಿಭಾಗಾಧಿಕಾರಿ ವೆಂಕ ಟೇಶ್, ಡಿಎಸ್ಪಿ ಕೆ.ಎಸ್.ನಾಗರಾಜ್, ಮಧುಗಿರಿ ಡಿಎಸ್ಪಿ ಕಲ್ಲೇಶ‍ಪ್ಪ ಇದ್ದರು.

ಪಂಚಾಯಿತಿ ಫ್ಯಾಮಿಲಿ ಪ್ರಾಪರ್ಟಿ ಅಲ್ಲ

‘ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಇದೆ. ಅದರ ಪ್ರಕಾರ ಗ್ರಾಮ ಪಂಚಾಯಿತಿಯಲ್ಲಿ ಅವರು ಅಧಿಕಾರ ನಡೆಸಲು ಅವಕಾಶ ಕೊಡಬೇಕು. ಅದರ ಬದಲಾಗಿ ಅವರ ಗಂಡ ಬಂದು ಕುಳಿತುಕೊಳ್ಳಲು ಪಂಚಾಯಿತಿ ಫ್ಯಾಮಿಲಿ ಪ್ರಾಪರ್ಟಿ ಅಲ್ಲ’ ಎಂದು  ಬಿ.ಆಡಿ ಮಧುಗಿರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಪ್ರಶ್ನಿಸಿದರು.

’ಮಧುಗಿರಿ ತಾಲ್ಲೂಕು ಪುರವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ. ಆದರೆ, ಪಂಚಾಯಿತಿಯಲ್ಲಿರುವ ಅಧ್ಯಕ್ಷರ ಕುರ್ಚಿಯಲ್ಲಿ ಅವರ ಗಂಡ ಬಿ.ಕೆ.ರಂಗಸ್ವಾಮಿ ಅವರೇ ಕುಳಿತು ಅಧಿಕಾರ ನಡೆಸುತ್ತಾರೆ’ ಎಂದು ಗ್ರಾಮದ ರಾಮಚಂದ್ರ ಎಂಬುವರು ಸಲ್ಲಿಸಿದ ದೂರಿನ ಬಗ್ಗೆ ವಿಚಾರಣೆ ನಡೆಸಿದರು.

’ಪಂಚಾಯಿತಿ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತುಕೊಳ್ಳುವುದಷ್ಟೇ ಅಲ್ಲ. ಅನುಮತಿ ಇಲ್ಲದೇ ಪ್ರವೇಶವನ್ನೂ ಮಾಡಕೂಡದು. ಹಾಗಿದ್ದಾಗ್ಯೂ ಇಂತಹದ್ದು ಹೇಗೆ ನಡೆಯುತ್ತದೆ? ಆಕಸ್ಮಿಕವಾಗಿಯಂತೂ ಇದು ನಡೆಯಲು ಸಾಧ್ಯವಿಲ್ಲ. ಲೋಪದ ಕುರಿತು ವರದಿ ಸಲ್ಲಿಸಿ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಅವರನ್ನು ಕರೆದು, ’ನಿಮ್ಮ ಎಲ್ಲ ತಾಲ್ಲೂಕು, ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕಳುಹಿಸಿ ಎಚ್ಚರಿಕೆ ನೀಡಬೇಕು. ಇಲ್ಲದೇ ಇದ್ದರೆ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಸೂಚಿಸಿದರು.

ಪದೇ ಪದೇ ಕೈಕೊಟ್ಟ ಮೈಕ್

ದೂರುದಾರರು ವಿವರಣೆ ನೀಡುವಾಗ ಪದೇ ಪದೇ ಮೈಕ್ ಕೈ ಕೊಟ್ಟಿತು. ಇದರಿಂದ ಉಪಲೋಕಾಯುಕ್ತರು ಪದೇ ಪದೇ ದೂರುದಾರರಿಂದ ವಿವರಣೆ ಪಡೆಯಬೇಕಾಯಿತು. ದೂರುದಾರರ ಅನೇಕ ಮಾತುಗಳು ಗಾಳಿಯಲ್ಲೇ ತೇಲಿ ಹೋದವು.  ಕೆಲ ಹೊತ್ತಿನ ಬಳಿಕ ಬಂದ ಸಿಬ್ಬಂದಿ ತಾಂತ್ರಿಕ ಸಮಸ್ಯೆ ಸರಿಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.