ADVERTISEMENT

ಕುಡುಕರ ಅಡ್ಡಾದಿಡ್ಡಿ ಸಂಚಾರಿ ತಾಣವಾದ ರಸ್ತೆಗಳು

ರಾಮರಡ್ಡಿ ಅಳವಂಡಿ
Published 19 ಫೆಬ್ರುವರಿ 2018, 7:03 IST
Last Updated 19 ಫೆಬ್ರುವರಿ 2018, 7:03 IST
ರಾಮರಡ್ಡಿ ಅಳವಂಡಿ
ರಾಮರಡ್ಡಿ ಅಳವಂಡಿ   

ತುಮಕೂರು: ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ಶರವೇಗದಲ್ಲಿ ಸಂಚರಿಸುವ ದ್ವಿಚಕ್ರವಾಹನ ಸವಾರರ ಅತಿರೇಕ ಹೆಚ್ಚುತ್ತಲೇ ಇದೆ. ಬಿ.ಎಚ್.ರಸ್ತೆ, ಅಶೋಕ ರಸ್ತೆ, ಎಂ.ಜಿ.ರಸ್ತೆ, ಎಸ್.ಎಸ್.ಪುರಂ ಪ್ರಮುಖ ರಸ್ತೆ ಸೇರಿ ಬಡಾವಣೆಯ ರಸ್ತೆಗಳಲ್ಲೂ ಇಂತಹ ದ್ವಿಚಕ್ರವಾಹನ ಸವಾರರರು ತಮ್ಮ ಅತಿರೇಕದ ಪ್ರದರ್ಶನ ಮಾಡುತ್ತಿರುವುದು ಕಂಡು ಬರುತ್ತಿದೆ.

ಅದರಲ್ಲೂ ಬಿ.ಎಚ್.ರಸ್ತೆ, ಅಶೋಕ ರಸ್ತೆಯಲ್ಲಿ ರಾತ್ರಿ 10 ಗಂಟೆಯ ನಂತರ ಮದ್ಯಪಾನ ಸೇವಿಸಿ ಗುಂಪು ಗುಂಪಾಗಿ ದ್ವಿಚಕ್ರವಾಹನದಲ್ಲಿ ಸಂಚರಿಸುವುದು. ಕಿರುಚಾಡುವುದು, ಎದುರಿಗೆ ಬರುವ ವಾಹನ ಸವಾರರಿಗೆ ಬೆದರಿಸುವುದು, ವಾಹನವನ್ನು ಜಿಗ್ ಜಾಗ್ ರೀತಿಯಲ್ಲಿ ಚಾಲನೆ ಮಾಡುವುದು, ಮದ್ಯದ ಬಾಟಲಿಗಳನ್ನು ರಸ್ತೆ ಬದಿ ಎಸೆಯುವುದು ಈಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾನಮತ್ತರಾದ ಸವಾರರು ವಾಹನಗಳನ್ನು ಬಿ.ಎಚ್.ರಸ್ತೆಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೀಳುವುದು, ರಸ್ತೆ ವಿಭಜಕ ನುಜ್ಜುಗಜ್ಜಾಗುವುದು ಸಾಮಾನ್ಯವಾಗಿದೆ. ಹೀಗೆ ಬಿದ್ದವರನ್ನು ಸಾರ್ವಜನಿಕರೇ ಎತ್ತಿ ರಸ್ತೆ ಬದಿ ಹಾಕುವುದು, ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿದ ಉದಾಹರಣೆಗಳೂ ಇವೆ.

ADVERTISEMENT

ಪಾನಮತ್ತರಾಗಿ ವಾಹನ ಓಡಿಸಿ ತಾವು ಮೋಜು ಮಾಡುವುದಷ್ಟೇ ಅವರಿಗೆ ಮುಖ್ಯ. ತಮ್ಮ ಪ್ರಾಣ, ಬೇರೆಯವರ ಜೀವದ ಬಗ್ಗೆ ಒಂದಿಷ್ಟು ಕಾಳಜಿ ಇರುವುದಿಲ್ಲ. ಇಂತಹವರು ಬರುವುದನ್ನು ಕಂಡ ಸಾರ್ವಜನಿಕರು ಎದ್ದು ಬಿದ್ದು ಓಡುತ್ತಾರೆ. ಇನ್ನು ತಡೆದು ಬುದ್ಧಿವಾದ ಹೇಳಲಿಕ್ಕಾಗುತ್ತದೆಯೇ ಎಂದು ಪ್ರಶ್ನಿಸುತ್ತಾರೆ.

ದ್ವಿಚಕ್ರವಾಹನ ಸವಾರರಷ್ಟೇ ಅಲ್ಲ. ಕಾರು ಚಾಲಕರ ವರ್ತನೆಯೂ ಮಿತಿ ಮೀರಿರುತ್ತಿದೆ. ಕರ್ಕಶ ಶಬ್ದ ಮಾಡುತ್ತ ಇತ್ತಿಂದತ್ತ, ಅತ್ತಿಂದಿತ್ತ ರಾತ್ರಿ ಪೂರ್ಣ ಸಂಚರಿಸುತ್ತಲೇ ಇರುತ್ತಾರೆ. ಗಸ್ತು ಪೊಲೀಸರು ಒಂದು ಕಡೆ ಜೀಪ್‌ನಲ್ಲಿ ಕುಳಿತು ಎಚ್ಚರಿಕೆ ನೀಡಿದರೆ ಮತ್ತೊಂದು ರಸ್ತೆಯಲ್ಲಿ ಹೋಗಿ ಅತಿರೇಕದ ವರ್ತನೆ ಪ್ರದರ್ಶಿಸಿಸುತ್ತಿರುತ್ತಾರೆ. ಕೆಲ ಗಸ್ತು ಪೊಲೀಸರು ಇಂತಹವರನ್ನು ಕಂಡು ಕಾಣದಂತೆ, ನೋಡಿಯೂ ನೋಡಿಲ್ಲದಂತೆ ಸಂಚರಿಸುತ್ತಿರುತ್ತಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ತುಮಕೂರು ವಿಶ್ವವಿದ್ಯಾನಿಲಯದ ಮುಖ್ಯದ್ವಾರದ ಬಳಿ ಸ್ಕೈ ವಾಕ್‌ ಹತ್ತಿರ ಪಾನಮತ್ತನಾಗಿದ್ದ ವ್ಯಕ್ತಿ ಸ್ಯಾಂಟ್ರೊ ಕಾರ್‌ ಅಡ್ಡಾದಿಡ್ಡಿಯಾಗಿ ಚಲಾಯಿಸಿದ್ದಾನೆ. ಕಾರನ್ನು ವಿಶ್ವವಿದ್ಯಾಲಯದ ಮುಖ್ಯದ್ವಾರದ ಕಡೆಗೆ ತಿರುಗಿಸುವುದು, ಕ್ಷಣಾರ್ಧದಲ್ಲೇ ಸ್ಕೈವಾಕ್‌ ಕಡೆ ತಿರುಗಿಸುವುದು, ಮತ್ತೊಮ್ಮೆ ರಿವರ್ಸ್ ತೆಗೆದುಕೊಳ್ಳುವುದು, ಸ್ಕೈ ವಾಕ್‌ ಹತ್ತಿರವೇ ಕಾರನ್ನು ಗಿರಗಿಟ್ಲೆ ತರಹ ತಿರುಗಾಡಿಸಿ ಹುಚ್ಚಾಟ ಮೆರೆದಿದ್ದು, ಸ್ಕೈವಾಕ್ ಹತ್ತಿರವೇ ಇದ್ದ ಇಬ್ಬರು ಗಸ್ತು ಪೊಲೀಸರೇ ಇದನ್ನು ಕಂಡು ಹೌಹಾರಿದ್ದರು ಎಂದು ದೃಶ್ಯವನ್ನು ಕಣ್ಣಾರೆ ಕಂಡ ನಾಗರಿಕರೊಬ್ಬರು ಹೇಳಿಕೊಂಡರು.

ಹಗಲು ಹೊತ್ತಿನಲ್ಲಿನಲ್ಲಿ ಎಲ್ಲೆಂದರಲ್ಲಿ ನಿಂತು ವಾಹನ ದಾಖಲಾತಿ ತಪಾಸಣೆ, ಹೆಲ್ಮೆಟ್ ಇಲ್ಲದ್ದಕ್ಕೆ, ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಸಂಚಾರ ಠಾಣೆ ಪೊಲೀಸರು ದಂಡ ಹಾಕುತ್ತಾರೆ. ಎಚ್ಚರಿಕೆ ನೀಡುತ್ತಾರೆ. ಆದರೆ, ಪಾನಮತ್ತರಾಗಿ ವಾಹನ ಓಡಿಸುವವರ ನಿಯಂತ್ರಣಕ್ಕೆ ಒಂದಿಷ್ಟು ಕ್ರಮ ಕೈಗೊಂಡಿಲ್ಲ. ಡ್ರಿಂಕ್ ಆ್ಯಂಡ್ ಡ್ರೈವ್ ಪತ್ತೆ ಕಾರ್ಯ ರಾತ್ರಿ 10ರ ಬಳಿಕ ಯಾವ ರಸ್ತೆಯಲ್ಲೂ ಕಂಡಿಲ್ಲ. ಹೀಗಾಗಿ, ಇಂತಹವರ ಉಪಟಳ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗಮನಕ್ಕೆ ತಂದರೆ ಕ್ರಮ

’ಸಂಚಾರ ನಿಯಮ ಉಲ್ಲಂಘಿಸಿ, ಮದ್ಯಪಾನ ಮಾಡಿ ವಾಹನ ಓಡಿಸುವವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಈಚೆಗೆ ವ್ಹೀಲಿಂಗ್ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಪಾನಮತ್ತರಾಗಿ ವಾಹನ ಓಡಿಸಿ ಭಯ ಹುಟ್ಟಿಸುವವರ ಬಗ್ಗೆ ಸಾರ್ವಜನಿಕರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್ ವಿಜಯಲಕ್ಷ್ಮಿ ಪ್ರಜಾವಾಣಿಗೆ ತಿಳಿಸಿದರು.

ರಾತ್ರಿ ಆಟೊ ಓಡಿಸಲು ಭಯ

’ಪಾನಮತ್ತ ಇಂತಹ ಸವಾರರ ಅಟಾಟೋಪಕ್ಕೆ ಆಟೊ ಚಾಲಕರೂ ಬೆಚ್ಚಿ ಬೀಳುತ್ತಿದ್ದಾರೆ. ಕುಡಿದು ಗಾಡಿ ತಂದು ಗುದ್ದಿದರೆ ಹಾಳಾಗುವುದು ನಮ್ಮದೇ ವಾಹನ. ಹೀಗಾಗಿ, ರಾತ್ರಿ ಹತ್ತು ಗಂಟೆಯ ನಂತರ ಇಂತಹವರ ಬಗ್ಗೆ ಒಂದಿಷ್ಟು ಎಚ್ಚರಿಕೆಯಿಂದ ನೋಡಿಕೊಂಡೇ ವಾಹನ ಓಡಿಸುತ್ತೇವೆ’ ಎಂದು ಆಟೊ ಚಾಲಕ ನಾಗರಾಜ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.