ADVERTISEMENT

ಶೇ 87ರಷ್ಟು ಶೇಂಗಾ ಬಿತ್ತನೆ ಪೂರ್ಣ

37,410 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಗುರಿ: ಇತರೆ ಬೆಳೆಗಳ ಬಿತ್ತನೆ ಗಣನೀಯ ಕುಸಿತ

ಎಚ್.ಸಿ.ಅನಂತರಾಮು
Published 8 ಆಗಸ್ಟ್ 2021, 3:45 IST
Last Updated 8 ಆಗಸ್ಟ್ 2021, 3:45 IST
ಮಳೆಯ ನಿರೀಕ್ಷೆಯಲ್ಲಿ ಶೇಂಗಾ ಬೆಳೆ
ಮಳೆಯ ನಿರೀಕ್ಷೆಯಲ್ಲಿ ಶೇಂಗಾ ಬೆಳೆ   

ಶಿರಾ: ತಾಲ್ಲೂಕಿನಲ್ಲಿ ಇದುವರೆಗೂ 43,197 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಇದರಲ್ಲಿ 32,680 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ.

ತಾಲ್ಲೂಕಿನಲ್ಲಿ ಇದುವರೆಗೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಶೇ 73.73ರಷ್ಟು ಬಿತ್ತನೆಯಾಗಿದೆ. 58,590 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಇದರಲ್ಲಿ 43,197 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈಗಲೂ ಮಳೆ ಬಂದರೆ ಇನ್ನೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆಯಾಗುವುದು.

ಜನವರಿಯಿಂದ ಆಗಸ್ಟ್ 4ರವರೆಗೆ ವಾಡಿಕೆಯಂತೆ 252.5 ಮಿ.ಮೀ ಮಳೆಯಾಗಬೇಕಿತ್ತು. 377.6 ಮಿ.ಮೀ‌ ಮಳೆಯಾಗುವ ಮೂಲಕ 125.1 ಮಿ.ಮೀ ಹೆಚ್ಚು ಮಳೆಯಾಗಿದೆ.

ADVERTISEMENT

ಬಿತ್ತನೆಯ ಸಮಯದಲ್ಲಿ ಹದ ಮಳೆಯಾಗದೆ ಕೇವಲ ತುಂತುರು ಮಳೆಯಾಗಿ ಮೋಡ ಕವಿದ ವಾತಾವರಣ ಇರುವುದರಿಂದ ಬಿತ್ತನೆಗೆ ತೊಂದರೆಯಾಗಿದೆ.

ಶೇಂಗಾ: ತಾಲ್ಲೂಕಿನಲ್ಲಿ ಶೇಂಗಾ ಪ್ರಮುಖ ಬೆಳೆಯಾಗಿದೆ. 37,410 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಇದರಲ್ಲಿ 32,680 ಹೆಕ್ಟೇರ್ (ಶೇ 87.36) ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಸಬಾ, ಹುಲಿಕುಂಟೆ ಹಾಗೂ ಗೌಡಗೆರೆ ಹೋಬಳಿಯಲ್ಲಿ ಅತಿ ಹೆಚ್ಚು ಶೇಂಗಾ ಬಿತ್ತನೆಯಾಗಿದೆ.

ಉಳಿದಂತೆ ರಾಗಿ 6,680 ಹೆಕ್ಟೇರ್, ಮುಸುಕಿನ ಜೋಳ 326 ಹೆಕ್ಟೇರ್, ತೊಗರಿ 989 ಹೆಕ್ಟೇರ್, ಅಲಸಂದೆ 150 ಹೆಕ್ಟೇರ್, ಹುರಳಿ 640 ಹೆಕ್ಟೇರ್, ಹತ್ತಿ 1,405 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಶೇಂಗಾ ಹೊರತುಪಡಿಸಿದರೆ ಇತರೆ ಬೆಳೆಗಳ ಬಿತ್ತನೆ ಗಣನೀಯವಾಗಿ ಕುಸಿತ ಕಂಡಿದೆ.

ಹೋಬಳಿವಾರು: ಕಸಬಾ ಹೋಬಳಿಯಲ್ಲಿ 12,350 ಹೆಕ್ಟೇರ್, ಹುಲಿಕುಂಟೆ ಹೋಬಳಿಯಲ್ಲಿ 10,898 ಹೆಕ್ಟೇರ್, ಗೌಡಗೆರೆ ಹೋಬಳಿಯಲ್ಲಿ 11,787 ಹೆಕ್ಟೇರ್, ಕಳ್ಳಂಬೆಳ್ಳ ಹೋಬಳಿಯಲ್ಲಿ 3,503 ಹೆಕ್ಟೇರ್ ಹಾಗೂ ಬುಕ್ಕಾಪಟ್ಟಣ ಹೋಬಳಿಯಲ್ಲಿ 3,090 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ಈಗ ಮಳೆ ಬಂದರೆ ರಾಗಿ, ಹುರಳಿ, ಜೋಳವನ್ನು ಬಿತ್ತನೆ ಮಾಡಲು ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ.

ಕೆಲವೆಡೆ ಶೇಂಗಾ ಹೂವು ಬಿಡುವ ಹಂತಕ್ಕೆ ತಲುಪಿದ್ದರೆ ಮತ್ತೆ ಕೆಲವೆಡೆ ಕಳೆ ತೆಗೆಯಬೇಕಾಗಿದೆ. ಮೋಡದ ವಾತಾವರಣ ಇದ್ದು ಗಾಳಿ ಬೀಸುತ್ತಿರುವುದರಿಂದ ಭೂಮಿ ಗಟ್ಟಿಯಾಗುತ್ತಿದ್ದು ಈಗ ಮಳೆ ಬಂದರೆ ಅನುಕೂಲವಾಗುವುದು. ರೈತರು ಸಾಲ ಮಾಡಿ ಶೇಂಗಾ ಬಿತ್ತನೆ ಮಾಡಿದ್ದಾರೆ. ಮಳೆ ಮುಂದೆ ಯಾವ ರೀತಿ ಬರುತ್ತದೆ ಎನ್ನುವುದರ ಮೇಲೆ ರೈತರ ಜೀವನ ಅವಲಂಬಿಸಿದೆ ಎನ್ನುತ್ತಾರೆ ರೈತ ವೆಂಕಟಪ್ಪ.

ಶಾಶ್ವತ ಬರಪೀಡಿತ ಪ್ರದೇಶ ಎಂದು ಹಣೆ ಪಟ್ಟಿ ಹೊಂದಿರುವ ಶಿರಾ ತಾಲ್ಲೂಕಿನಲ್ಲಿ‌ ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ರೈತರು ಮಳೆಯನ್ನೇ ನಂಬಿ ವ್ಯವಸಾಯ ಮಾಡಬೇಕಿದೆ. ವಾಡಿಕೆಗಿಂತ ಹೆಚ್ಚು ಮಳೆ‌ ಬಂದರೂ ಸಮಯಕ್ಕೆ ಸರಿಯಾಗಿ ಮಳೆ ಸಮರ್ಪಕವಾಗಿ ಹಂಚಿಕೆಯಾಗದಿರುವುದು ರೈತರ ಬದುಕಿಗೆ ಮಾರಕವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.