ADVERTISEMENT

9 ತಿಂಗಳಿಂದ ನೀರು ಕೊಡದ ಗ್ರಾ.ಪಂ.

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 7:02 IST
Last Updated 6 ಸೆಪ್ಟೆಂಬರ್ 2013, 7:02 IST

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ಪೇಟೆ ಬೀದಿ ವ್ಯಾಪ್ತಿಗೆ ಒಂಬತ್ತು ತಿಂಗಳಿಂದ ಕುಡಿಯುವ ನೀರು ಸರಬರಾಜಾಗುತ್ತಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸುಮಾರು ಒಂಬತ್ತು ತಿಂಗಳಿನಿಂದ ಕುಡಿಯುವ ನೀರಿನ ತಾಪತ್ರಯ ಗ್ರಾಮಸ್ಥರನ್ನು ಹೈರಾಣು ಮಾಡಿದೆ ಎಂದರು.

ಗ್ರಾಮ ಪಂಚಾಯಿತಿ ಆಡಳಿತ ಅಥವಾ ಸದಸ್ಯರು ಈ ಕುರಿತು ಗಮನ ಹರಿಸಿಲ್ಲ. ಮೇಲಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿಲ್ಲ ಎಂದು ದೂರಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಗ್ರಾಮ ಪಂಚಾಯಿತಿಯಲ್ಲಿ ಜನರ ಕಷ್ಟ ಕೇಳುವವರೇ ಇಲ್ಲ. ಯಾರೊಬ್ಬರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಮಳೆ ನೀರಿನಿಂದ ಈಚೆಗೆ ಚರಂಡಿಗಳು ತುಂಬಿ ಹರಿದು ಮನೆಗಳಿಗೆ ನೀರು ನುಗ್ಗಿದ್ದರೂ ಗ್ರಾಮ ಪಂಚಾಯಿತಿ ಗಮನ ಹರಿಸಲಿಲ್ಲ ಎಂದು ಆರೋಪಿಸಿದರು.

ಕುಡಿಯುವ ನೀರು ಸೇರಿದಂತೆ ಎಲ್ಲ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಒತ್ತಾಯಿಸಿದರು ಗ್ರಾಮಸ್ಥರಾದ ಉಮೇಶ್, ಬಷೀರ್‌ಸಾಬ್, ಸೈಯದ್ ಅಜೀಜ್, ಮಲ್ಲಿಕಾರ್ಜುನಯ್ಯ, ಬಾಬು, ರೇಣುಕಯ್ಯ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.