ADVERTISEMENT

ಒಂದು ಕಡಿದು ಹತ್ತು ಮರ ಬೆಳೆಸಿದ ಶಿವಣ್ಣ ದಂಪತಿ

ಟಿ.ಎಚ್.ಗುರುಚರಣ್ ಸಿಂಗ್
Published 5 ಜೂನ್ 2020, 11:08 IST
Last Updated 5 ಜೂನ್ 2020, 11:08 IST
ಸಸಿಗಳ ಜತೆ ಶಿವಣ್ಣ ದಂಪತಿ
ಸಸಿಗಳ ಜತೆ ಶಿವಣ್ಣ ದಂಪತಿ   

ಕುಣಿಗಲ್: ಮರ ಕಡಿದು ಮಾರಾಟಮಾಡುವ ವೃತ್ತಿ ಮಾಡುವ ದಂಪತಿ ಒಂದು ಮರ ಕಡಿದರೆ ಹತ್ತು ಸಸಿ ನೆಟ್ಟು ಬೆಳೆಸುತ್ತಿದ್ದಾರೆ. ಈ ಕಾಯಕದಿಂದ ಇದುವರೆಗೂ ಬೆಳೆದು ನಿಂತ ಮರಗಳು ಬರೋಬ್ಬರಿ 20 ಸಾವಿರ. ಅರೆಪಾಳ್ಯದ ಶಿವಣ್ಣ ದಂಪತಿಯ ಪರಿಸರ ಪ್ರೇಮ ಎಲ್ಲರ ಗಮನಸೆಳೆದಿದೆ.

ತಾಲ್ಲೂಕಿನ ಸಂತೆ ಮಾವತ್ತೂರು ಪಂಚಾಯಿತಿಯ ಅರೆಪಾಳ್ಯದ ಶಿವಣ್ಣ ಮರಗಳನ್ನು ಖರೀದಿಸಿ ಕಡಿದು ಮಾರಾಟ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ವ್ಯಾಪಾರ ಮಾಡುವ ಸಮಯದಲ್ಲಿ ಹಿರಿಯರೊಬ್ಬರು ‘ವ್ಯಾಪಾರಕ್ಕಾಗಿ ಮರ ಕಡಿಯುತ್ತಾ ಹೋದರೆ ಪರಿಸರ ಉಳಿಯುವುದೆ’ ಎಂದು ಪ್ರಶ್ನಿಸಿದರು. ಅಂದೇ ಶಿವಣ್ಣ ಅವರ ಮನಸ್ಸಿನಲ್ಲಿ ಹೊಸ ಆಲೋಚನೆ ಮೂಡಿ ಮರ ನೆಡುವ ಕಾಯಕಕ್ಕೆ ಮುಂದಾದರು. ಏಳು ವರ್ಷಗಳಿಂದ ಇದು ನಿರಂತರವಾಗಿ ಸಾಗಿದೆ. ಒಂದು ಮರ ಕಡಿದರೆ ಹತ್ತು ಮರ ಬೆಳೆಸುವ ಶಪಥದೊಂದಿಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಮೊದಲಿಗೆ ಖಾಸಗಿ ನರ್ಸರಿಗಳಿಂದ ಸಸಿಗಳನ್ನು ಖರೀದಿಸಿ ತಮ್ಮ 20 ಎಕರೆ ಜಮೀನಿನಲ್ಲಿ ನೆಟ್ಟು ಬೆಳೆಸಲಾರಂಭಿಸಿದರು. ಅರಣ್ಯ ಇಲಾಖೆಯಿಂದ ಪ್ರತಿವರ್ಷ 500ರಿಂದ 600 ಹೊನ್ನೆ, ಬೀಟೆ, ಸಿಲ್ವರ್, ಹೊಂಗೆ, ತೇಗ, ಯಾಬೇವಿನ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ.

ADVERTISEMENT

‘ಬೆಳೆದ ಮರಗಳನ್ನು ಕಟಾವುಮಾಡಿ ಮಾರಿದ್ದರಿಂದ ಕಳೆದ ವರ್ಷ ಸುಮಾರು ₹5 ಲಕ್ಷ ಆದಾಯ ಬಂದಿದೆ. ಸುಮಾರು 200 ಶ್ರೀಗಂಧದ ಮರಗಳನ್ನು ಬೆಳೆದಿದ್ದೇವೆ. ಆದರೆ, ದುಷ್ಕರ್ಮಿಗಳು ಕಳವು ಮಾಡುತ್ತಾರೆ. ಅವುಗಳ ನಿರ್ವಹಣೆ ಕಷ್ಟವಾಗಿದೆ’ ಎನ್ನುತ್ತಾರೆ ಶಿವಣ್ಣ.

ಶಿವಣ್ಣ ಅವರ ಮರ ಬೆಳೆಸುವ ಉತ್ಸಾಹಕ್ಕೆ ಪತ್ನಿ ಗೌರಮ್ಮ, ಮಕ್ಕಳಾದ ಲಕ್ಷ್ಮಣ, ವಸಂತ್ ಸಾಥ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.