ತುಮಕೂರು: ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿ ವಾಸ್ತವಕ್ಕೆ ದೂರವಾಗಿದೆ. ಸಂಪೂರ್ಣ ತಪ್ಪಾಗಿದೆ ಎಂದು ನಗರ ವೀರಶೈವ ಸಮಾಜ ಸೇವಾ ಸಮಿತಿಯ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ ತಿಳಿಸಿದ್ದಾರೆ.
ಈ ಹಿಂದೆ ಶೇ 18ರಷ್ಟಿದ್ದ ವೀರಶೈವ ಲಿಂಗಾಯತ ಸಮುದಾಯದ ಜನಸಂಖ್ಯೆಯನ್ನು ಇದ್ದಕಿದ್ದಂತೆ ಶೇ 8ಕ್ಕೆ ಇಳಿಸಲಾಗಿದೆ. ಗಣತಿ ನಡೆಸಿದ ಅಧಿಕಾರಿಗಳ ಎಡವಟ್ಟು ಹಾಗೂ ಸತ್ಯವನ್ನು ಮರೆಮಾಚಿದೆ. ವರದಿಯ ಆಧಾರದ ಮೇಲೆ ಸರ್ಕಾರದಿಂದ ಸಿಗುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸವಲತ್ತುಗಳಿಂದ ಸಮುದಾಯ ವಂಚಿತವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯ ಅವೈಜ್ಞಾನಿಕ ವರದಿಯನ್ನು ಒಪ್ಪುವುದಿಲ್ಲ. ರಾಜ್ಯದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯವನ್ನು ಜಾತಿ ಜನಗಣತಿ ವರದಿಯಲ್ಲಿ ಅತಿ ಕಡಿಮೆ ಎಂದು ಬಿಂಬಿಸಲಾಗಿದೆ. ಸರ್ಕಾರ ಮರು ಸಮೀಕ್ಷೆಗೆ ಆದೇಶಿಸಿ, ಪ್ರತಿ ಮನೆಗೆ ಅಧಿಕಾರಿಗಳ ತಂಡ ಕಳುಹಿಸಬೇಕು. ಸತ್ಯಾಂಶದಿಂದ ಕೂಡಿದ, ನಿಖರವಾದ ಅಂಕಿ–ಅಂಶಗಳ ವರದಿ ಸಿದ್ಧಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.