ADVERTISEMENT

ಲಂಚಕ್ಕೆ ಬೇಡಿಕೆಯಿಟ್ಟ ಪ್ರಕರಣ: ಪಿಪಿ ಜಾಮೀನು ಅರ್ಜಿ ತಿರಸ್ಕಾರ

ಖುಲಾಸೆಯಾಗಿದ್ದ ಪ್ರಕರಣದ ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2019, 18:06 IST
Last Updated 14 ಮೇ 2019, 18:06 IST
ಜಿ. ಪೂರ್ಣಿಮಾ
ಜಿ. ಪೂರ್ಣಿಮಾ   

ತುಮಕೂರು: ಖುಲಾಸೆ ಆಗಿದ್ದ ಪ್ರಕರಣದ ಮೇಲ್ಮನವಿ ಸಲ್ಲಿಸದಿರಲು ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ದಾಳಿಗೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ತಿಪಟೂರು ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕಿ (ಪಿಪಿ) ಪೂರ್ಣಿಮಾ ಅವರ ಜಾಮೀನು ಅರ್ಜಿಯನ್ನು ಇಲ್ಲಿನ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ವಜಾಗೊಳಿಸಿದೆ.

ತಿಪಟೂರಿನಲ್ಲಿ ಏ.29ರಂದು ಎಸಿಬಿ ಪೊಲೀಸರು ದಾಳಿ ನಡೆಸಿ ಪೂರ್ಣಿಮಾ ಹಾಗೂ ಶರಣಕುಮಾರ್ ಎಂಬುವರನ್ನು ವಶಕ್ಕೆ ಪಡೆದಿದ್ದರು. ಮುಂದಿನ ಪ್ರಕ್ರಿಯೆ ಕೈಗೊಂಡಿದ್ದರು. ಪೂರ್ಣಿಮಾ ಹಾಗೂ ಶರಣಕುಮಾರ್ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಪೂರ್ಣಿಮಾ ಅವರು ಮೊದಲ ಬಾರಿಗೆ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಸರ್ಕಾರಿ ಅಭಿಯೋಜಕರಾಗಿ ನೇಮಕವಾಗಿದ್ದರು. ಆ ಸಂದರ್ಭದಲ್ಲಿ ಇವರ ಮೇಲೆ ಆರೋಪಗಳು ಎದುರಾಗಿದ್ದವು. ಅಲ್ಲಿನ ವಕೀಲರೇ ಇವರ ವಿರುದ್ಧ ದೂರು ನೀಡಿದ್ದರು. ಐಪಿಸಿ ಕಲಂ 307, 323ರ ಅಡಿಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಇವರು ಸರ್ಕಾರಿ ಅಭಿಯೋಜಕರಾಗಿ ನೇಮಕವಾದ ಅವಧಿಯಲ್ಲಿ ಸಾಕಷ್ಟು ಅಭಿಯೋಜಕರ ನೇಮಕಾತಿ ಅಕ್ರಮಗಳಿಂದ ಕೂಡಿದೆ ಎಂದು ಆರೋಪಿಸಿ ಲೋಕಾಯುಕ್ತ ತನಿಖೆ ಸಹ ನಡೆದಿತ್ತು. ಈ ಪ್ರಕರಣದಲ್ಲಿಯೂ ಪೂರ್ಣಿಮಾ ಆರೋಪಿಯಾಗಿದ್ದಾರೆ ಎನ್ನುವ ಮಾಹಿತಿಯನ್ನು ಎಸಿಬಿ ಪರ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

ಪ್ರಕರಣದ ಗಂಭೀರತೆ ಅರಿತ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ತಾರಕೇಶ್‌ಗೌಡ ಪಾಟೀಲ್ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.