ADVERTISEMENT

ತಹಶೀಲ್ದಾರ್ ನಡೆ; ಅನುಮಾನಕ್ಕೆ ಎಡೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 16:47 IST
Last Updated 3 ಜುಲೈ 2020, 16:47 IST

ತುಮಕೂರು: ಜಮೀನಿನ ದಾಖಲೆಗಳ ವಿಚಾರವಾಗಿ ತಹಶೀಲ್ದಾರ್ ಹೆಸರು ಹೇಳಿ ₹ 1.20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಎದುರು ಹೇಳಿಕೆ ನೀಡಬೇಕಾಗಿದ್ದ ತಹಶೀಲ್ದಾರ್ ಮೋಹನ್ ಕುಮಾರ್ ರಜೆ ಹಾಕಿರುವುದು ಮತ್ತು ಹೇಳಿಕೆ ನೀಡಲು ಬಾರದಿರುವುದು ಚರ್ಚೆಗೆ ಗ್ರಾಸವಾಗಿದೆ. ಅವರ ನಡೆ ಅನುಮಾನಕ್ಕೂ ಎಡೆ ಮಾಡಿಕೊಟ್ಟಿದೆ.

ಕೋರ ಹೋಬಳಿ ಕರೀಕೆರೆ ಗ್ರಾಮದ ರಂಗನಾಥ್ ಅವರು ಜಮೀನಿನ 1–5 ನಮೂನೆಯನ್ನು ತಹಶೀಲ್ದಾರ್ ಅವರಿಂದ ಪಡೆಯಬೇಕಿತ್ತು. ಇದಕ್ಕಾಗಿ ಮಧ್ಯವರ್ತಿಗಳು ಅವರಿಂದ ₹ 1.25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ‘ನಾನು ತುಮಕೂರು ತಹಶೀಲ್ದಾರ್ ಮೋಹನ್. ಆ ಹಣ ಮತ್ತು ಸಂಬಂಧಿಸಿದ ದಾಖಲೆಗಳನ್ನು ರುದ್ರಸ್ವಾಮಿ ಬಳಿ ನೀಡಿ’ ಎಂದು ಮಧ್ಯವರ್ತಿಯೊಬ್ಬರು ರಂಗನಾಥ್ ಜತೆ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿದ್ದರು.

ಪ್ರಕರಣ ಸಂಬಂಧ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್‌ಪಿ ಉಮಾಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ರುದ್ರಸ್ವಾಮಿ, ಶಿವಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.

ADVERTISEMENT

‘ನಾನು ತಹಶೀಲ್ದಾರ್ ಮೋಹನ್’ ಎಂದು ಮಧ್ಯವರ್ತಿಯಾದ ಶಿವಕುಮಾರ್, ರಂಗನಾಥ್ ಅವರ ಜತೆ ಸಂಭಾಷಣೆ ನಡೆಸಿದ್ದರು ಎನ್ನಲಾಗುತ್ತಿದೆ. ಪ್ರಕರಣ ಸಂಬಂಧ ಎಸಿಬಿ ಎದುರು ತಹಶೀಲ್ದಾರ್ ಹೇಳಿಕೆ ನೀಡಬೇಕಿದೆ. ಹೇಳಿಕೆ ನೀಡಲು ಗುರುವಾರ ತಹಶೀಲ್ದಾರ್ ಬರಬೇಕಿತ್ತು. ಆದರೆ ಅವರು ಹಾಜರಾಗಲಿಲ್ಲ. ಶುಕ್ರವಾರವೂ ಹಾಜರಾಗಿಲ್ಲ. ಅಲ್ಲದೆ ಅವರ ಮೊಬೈಲ್ ಸ್ವಿಚ್ ಆಪ್ ಆಗಿದೆ. ಇದು ಸಾರ್ವಜನಿಕ ಮತ್ತು ಅಧಿಕಾರಿ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.