ADVERTISEMENT

ಭ್ರಷ್ಟರಿಗೆ ನಡುಕ ಹುಟ್ಟಿಸಿದ್ದ ಎಸಿಬಿ ಡಿವೈಎಸ್ಪಿ ರಘುಕುಮಾರ್ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 12:15 IST
Last Updated 20 ಆಗಸ್ಟ್ 2019, 12:15 IST
ಎಸಿಬಿ ಡಿವೈಎಸ್ಪಿ ರಘುಕುಮಾರ್
ಎಸಿಬಿ ಡಿವೈಎಸ್ಪಿ ರಘುಕುಮಾರ್   

ತುಮಕೂರು: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಡಿವೈಎಸ್ಪಿ ವಿ.ರಘುಕುಮಾರ್ ಅವರು ಹೊಸಪೇಟೆ ಉಪವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.

2018 ರ ಅಕ್ಟೋಬರ್‌ನಲ್ಲಿ ತುಮಕೂರು ಎಸಿಬಿ ಡಿವೈಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ರಘುಕುಮಾರ್ ಅವರು ಲಂಚಕ್ಕೆ ಬೇಡಿಕೆ ಇಟ್ಟ ಹಲವರನ್ನು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರದೊಂದಿಗೆ ಎಸಿಬಿ ಬಲೆಗೆ ಕೆಡವಿದ್ದರು.

ಅಲ್ಲದೇ ತಾಲ್ಲೂಕು ಹಂತದಲ್ಲಿ ಜನಸಂಪರ್ಕ ಸಭೆಗಳನ್ನು ಪದೇ ಪದೇ ನಡೆಸುವ ಮೂಲಕ ಜನರಲ್ಲಿ ಎಸಿಬಿ‌ ಬಗ್ಗೆ ಹೆಚ್ಚು ವಿಶ್ವಾಸ ಮೂಡಿಸಿದ್ದರು.‌

ADVERTISEMENT

ಸಾರ್ವಜನಿಕ ದೂರುಗಳನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಿದ್ದರು. ಇದರಿಂದ ಅವರ ಬಗ್ಗೆ ಸಾರ್ವಜನಿಕ ವಲಯದಲ್ಲಿ ದಕ್ಷ ಎನ್ನುವ ಅಭಿಪ್ರಾಯ ಇದೆ. ಈ ಅಭಿಪ್ರಾಯ ಮತ್ತು ದಾಳಿಗಳು ಎಸಿಬಿಗೆ ಜನರು ಹೆಚ್ಚು ದೂರುಗಳನ್ನು ಕೊಡಲು ಕಾರಣವಾಯಿತು.

ಲಂಚಕ್ಕೆ ಬೇಡಿಕೆ ಇಟ್ಟಿದ್ದ ತಿಪಟೂರಿನ ಸರ್ಕಾರಿ ಸಹಾಯಕ ಅಭಿಯೋಜಕಿಯನ್ನು ಎಸಿಬಿ ಬಲೆಗೆ ಕೆಡವಿದ್ದು,ರಾಜ್ಯ ಮಟ್ಟದಲ್ಲಿ ಸುದ್ದಿ ಆಗಿತ್ತು. ಅವರ ಕಚೇರಿಗೆ ದೂರುಗಳನ್ನು ಹೊತ್ತು ಸಾರ್ವಜನಿಕರು ನಿತ್ಯವೂ ಬರುತ್ತಿದ್ದರು.

ಅಧಿಕಾರ ವಹಿಸಿಕೊಂಡ ಒಂದೆರಡು ದಿನಗಳಲ್ಲಿಯೇ ಸರ್ಕಾರಿ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ವಿವಿಧ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಕಡ್ಡಾಯವಾಗಿ ಎಸಿಬಿ ನಾಮಫಲಕ ಅಳವಡಿಸುವಂತೆ ಸೂಚಿಸಿದ್ದರು‌.‌ ಅಲ್ಲದೇ ಆಗಾಗ ಈ ಬಗ್ಗೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಿಗಾವಹಿಸಿದ್ದರು.

ಕೆಲ ಉದಾಹರಣೆಗಳು: ಬೆಳೆ ಸಾಲ ಮೊತ್ತ ₹ 50 ಸಾವಿರದ ಚೆಕ್ ನೀಡಲು ₹ 5 ಸಾವಿರ ಲಂಚ ಪಡೆಯುತ್ತಿದ್ದ ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ದೊಡ್ಡಗುಣಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಓಂಕಾರಮೂರ್ತಿ ಅವರನ್ನು ಬಲೆಗೆ ಕೆಡವಿದ್ದರು.

ತುಮಕೂರಿನಲ್ಲಿ ಎಲೆಕ್ಟ್ರಿಕ್ ಗುತ್ತಿಗೆದಾರರ ಲೈಸೆನ್ಸ್ ನವೀಕರಣಕ್ಕೆ ₹ 10 ಸಾವಿರ ಲಂಚ ಪಡೆಯುತ್ತಿದ್ದ ಡೆಪ್ಯುಟಿ ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಕಚೇರಿಯ ಸಿಬ್ಬಂದಿ ಶಿವಮೂರ್ತಿ ಅವರು ಇವರ ಬಲೆಗೆ ಸಿಕ್ಕಿಬಿದ್ದಿದ್ದರು.

ಅದೇ ರೀತಿ ಮಧುಗಿರಿಯಲ್ಲಿ ದಾನಪತ್ರವನ್ನು ನೋಂದಣಿ ಮಾಡಿಕೊಡಲು ₹ 4 ಸಾವಿರ ಲಂಚ ಪಡೆಯುತ್ತಿದ್ದ ಉಪನೋಂದಣಿ ಅಧಿಕಾರಿ ರಾಮಚಂದ್ರಯ್ಯ ಹಾಗೂ ಪತ್ರ ಬರಹಗಾರ ರಂಗನಾಥ್ ಅವರನ್ನು ಎಸಿಬಿ ಬಲೆಗೆ ಕೆಡಿವಿದ್ದರು.

ಹೀಗೆ, ಹಲವಾರು ಪ್ರಕರಣಗಳು ಸಾರ್ವಜನಿಕರ ಗಮನ ಸೆಳೆದಿದ್ದವು. ಎಸಿಬಿ ಅಧಿಕಾರಿಗಳು ಜನಸ್ನೇಹಿಯಾಗಿ ಸಕ್ರಿಯವಾಗಿ ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಈ ಅಧಿಕಾರಿ ಉದಾರಣೆ ಎಂದು ದೂರು ಕೊಟ್ಟು ಪರಿಹಾರ ಕಂಡುಕೊಂಡ ಅನೇಕರು ಶ್ಲಾಘಿಸಿದ ಉದಾಹರಣೆಗಳಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.