ADVERTISEMENT

ಇಂದ್ರಧನುಷ್ ಲಸಿಕಾ ಅಭಿಯಾನ; ಯಶಸ್ವಿಗೆ ಸೂಚನೆ

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅಧ್ಯಕ್ಷತೆಯಲ್ಲಿ ಲಸಿಕಾ ಕಾರ್ಯಪಡೆ ಸಭೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 19:45 IST
Last Updated 6 ನವೆಂಬರ್ 2019, 19:45 IST
ಚನ್ನಬಸಪ್ಪ
ಚನ್ನಬಸಪ್ಪ   

ತುಮಕೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಡಿ.2ರಿಂದ ಹಮ್ಮಿಕೊಂಡಿರುವ ‘ಮಿಷನ್ ಇಂದ್ರಧನುಷ್–2.0 ಲಸಿಕಾ ಅಭಿಯಾನ’ ಮತ್ತು ‘ಡಿಪಿಟಿ/ಟಿಡಿ ಲಸಿಕಾ’ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಇತರ ಇಲಾಖೆಗಳ ಸಹಕಾರದಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂದರು.

ADVERTISEMENT

ಹುಟ್ಟಿನಿಂದ 2 ವರ್ಷದ ಒಳಗಿನ ಮಕ್ಕಳಿಗೆ ಡಿ.2ರಿಂದ 10ರವರೆಗೆ ಲಸಿಕೆ ಹಾಕಲಾಗುತ್ತವೆ. ಈ ಆಂದೋಲನದ ಕುರಿತು ಜನರಿಗೆ ಹೆಚ್ಚಿನ ಅರಿವು ಮೂಡಿಸಲು ಕರಪತ್ರಗಳನ್ನು ಹಂಚಬೇಕು. ತುಮಕೂರು ನಗರ ವ್ಯಾಪ್ತಿಯಲ್ಲಿ ನರ್ಸ್‌ಗಳು ಮನೆ ಮನೆಗೆ ಭೇಟಿ ನೀಡಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆಗಾಗ್ಗೆ ಪರಿಶೀಲಿಸುತ್ತಿರಬೇಕು ಎಂದರು.

ಡಿ.11ರಿಂದ 30ರವರೆಗೆ 5,10 ಮತ್ತು 16ನೇ ವಯಸ್ಸಿನ ಮಕ್ಕಳಿಗೆ ಹಾಕುವ ಡಿಪಿಟಿ/ಟಿಡಿ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಯಾವ ಮಕ್ಕಳೂ ಲಸಿಕೆಯಿಂದ ವಂಚಿತರಾಗಬಾರದು. ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳೇ ಅಲ್ಲದೇ ವಸತಿ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಹಾಗೂ ಇನ್ನಿತರ ಶಾಲೆ ಮಕ್ಕಳನ್ನು ಒಳಗೊಳ್ಳುವಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಇದಕ್ಕೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡುತ್ತೇವೆ ಎಂದರು.

ಅಧಿಕಾರಿ ಕೇಶವರಾಜ್, ತುಮಕೂರು ಸೇರಿದಂತೆ ಆಯ್ದ 19 ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಲಸಿಕೆಯಿಂದ ವಂಚಿತರಾಗಿರುವ ಮಕ್ಕಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅದನ್ನು ವರದಿ ಮಾಡಿ ಇಲಾಖೆಗೆ ಸಲ್ಲಿಸುವ ಕೆಲಸ ನಡೆಯುತ್ತಿದೆ. ಡಿಸೆಂಬರ್ 2ರಿಂದ ಲಸಿಕೆ ಹಾಕಲಾಗುವುದು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರ ಬೇಕಾಗಿದೆ ಎಂದರು.

ಜಿಲ್ಲಾ ಆರೋಗ್ಯ ವಿಚಕ್ಷಣಾಧಿಕಾರಿ ಮೋಹನ್‌ದಾಸ್, ಡಿಡಿಪಿಐ ಎಂ.ಆರ್.ಕಾಮಾಕ್ಷಿ, ರಮಾದೇವಿ, ಮೋಹನ್, ಶಿವಕುಮಾರ್, ಯಶೋದಮ್ಮ, ಗೀತಾ, ತಾಲ್ಲೂಕು ಆರೋಗ್ಯಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.