ಮಧುಗಿರಿ: ರೈತರು ತಮ್ಮ ಜಮೀನುಗಳಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ಬೆಳೆಗಳನ್ನು ಬೆಳೆಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.
ತಾಲ್ಲೂಕಿನ ಬಡವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಭಾರತೀಯ ತೋಟಗಾರಿಕೆ ಸಂಶೋಧನೆ ಸಂಸ್ಥೆ ಹಾಗೂ ಹಿರೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಏಳಿಗೆಗಾಗಿ ಸಾವಿರಾರು ಕೋಟಿ ಅನುದಾನ ಮೀಸಲಿರಿಸಿದ್ದಾರೆ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಡರಾಗಬೇಕು. ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅಧಿಕಾರಿಗಳು ಎಷ್ಟರಮಟ್ಟಿಗೆ ರೈತರಿಗೆ ಮಾಹಿತಿ ನೀಡುತ್ತಿದ್ದೀರಾ ಎಂದು ಪ್ರಶ್ನಿಸಿದರು.
ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿ ಹಾಗೂ ರೈತರ ಅನುಕೂಲಕ್ಕಾಗಿ ಕೊಡಿಗೇನಹಳ್ಳಿ ಮತ್ತು ಐ.ಡಿ.ಹಳ್ಳಿ ಹೋಬಳಿಯಲ್ಲಿ ಹೆಚ್ಚಾಗಿ ಚೆಕ್‌ಡ್ಯಾಂಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋದರೆ ಅದನ್ನು ತೆಗೆದು ಇನ್ನೊಂದು ಬೋರ್‌ವೆಲ್ ಕೊರೆಯುವುದರಲ್ಲೇ ರೈತನ ಆಯಸ್ಸು ಮುಗಿದಿರುತ್ತದೆ. ರೈತರು ಒಪ್ಪಿದಲ್ಲಿ ಒಂದು ಎಕರೆ, ಅರ್ಧ ಎಕರೆ ಪ್ರದೇಶದಲ್ಲಿ ಕೃಷಿ ಹೊಂಡಗಳನ್ನು ಜಲಶಕ್ತಿ ಇಲಾಖೆಯಿಂದ ನಿರ್ಮಿಸಿಕೊಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಗೂಟೋರು ಶಿವಪ್ಪ, ಕೃಷಿ ವಿಜ್ಞಾನಿಗಳಾದ ರಾಘವೇಂದ್ರ ಭಟ್ಟಾಚಾರ್ಯ, ವೆಂಕಟ್ ಸುಬ್ಬಣ್ಣ , ತಾ.ಪಂ.ಇಒ ಲಕ್ಷ್ಮಣ್, ಗ್ರಾ.ಪಂ.ಅಧ್ಯಕ್ಷೆ ಭಾನುಪ್ರಿಯ, ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಲ್.ಸಿ.ನಾಗರಾಜು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹನುಮಂತ ರೆಡ್ಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.