ADVERTISEMENT

ಪ.ಪಂ ಆದಾಯ ಹೆಚ್ಚಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 12:38 IST
Last Updated 16 ಏಪ್ರಿಲ್ 2025, 12:38 IST
ಗುಬ್ಬಿಯಲ್ಲಿ ಸಾಮಾನ್ಯ ಸಭೆ ನಡೆಯಿತು
ಗುಬ್ಬಿಯಲ್ಲಿ ಸಾಮಾನ್ಯ ಸಭೆ ನಡೆಯಿತು    

ಗುಬ್ಬಿ: ಪಟ್ಟಣ ಪಂಚಾಯಿತಿಯ ಎಲ್ಲ ವಾರ್ಡ್‌ಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಲಭ್ಯವಿರುವ ಅನುದಾನ ಬಳಕೆಗೆ ಅನುಮೋದನೆ ಪಡೆಯುವ ಉದ್ದೇಶದಿಂದ ಮಂಗಳವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಂಗಳಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಪಟ್ಟಣದಲ್ಲಿ ಬಪರ್ ಜೋನ್ ಒತ್ತುವರಿಯಾಗುತ್ತಿದೆ. ಅದರ ರಕ್ಷಣೆಗೆ ಅಗತ್ಯ ಇರುವ ತಂತಿಬೇಲಿ ನಿರ್ಮಿಸುವಂತೆ ಸಭೆ ಪ್ರಾರಂಭದಲ್ಲಿಯೇ ಸದಸ್ಯರು ಒತ್ತಾಯ ಮಾಡುವ ಜೊತೆಗೆ ಪಟ್ಟಣದ ವಿವಿಧೆಡೆ ಕಾರು ಪಾರ್ಕಿಂಗ್ ಹೆಸರಿನಲ್ಲಿ ಮನೆಯ ಪಕ್ಕದಲ್ಲಿ ರಸ್ತೆಗೆ ಹೊಂದಿಕೊಂಡಂತೆ ಶೆಡ್‌ ಹಾಕುತ್ತಿದ್ದಾರೆ. ಇದರಿಂದ ಬೇರೆ ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ. ಮುಖ್ಯಾಧಿಕಾರಿ ತುರ್ತುಕ್ರಮ ಕೈಗೊಂಡು ಅಕ್ರಮ ನಿರ್ಮಾಣ ಮಾಡಿರುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಆದಾಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕರ ವಸೂಲಿಯನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಮಾಡಬೇಕಿದೆ. ಖಾಸಗಿ ಕಾರ್ಯಕ್ರಮಗಳಿಗೆ ತೆರಳುವ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನಗಳಿಗೆ ಬಾಡಿಗೆ ನಿಗದಿಪಡಿಸಿದಲ್ಲಿ ಪಟ್ಟಣ ಪಂಚಾಯಿತಿಗೆ ಆದಾಯವಾಗುವುದು ಹಾಗೂ ಪಟ್ಟಣದಲ್ಲಿರುವ ಜಗಜೀವನ ರಾಂ ಭವನಕ್ಕೆ ಬಾಡಿಗೆ ನಿಗದಿಪಡಿಸಿ ಸಾರ್ವಜನಿಕ ಉಪಯೋಗಕ್ಕೆ ನೀಡಿದಲ್ಲಿ ಅನುಕೂಲವಾಗುವುದು ಎಂದು ಸದಸ್ಯರು ಸೂಚಿಸಿದರು.

ADVERTISEMENT

ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ, ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಆವರಣ ಗೋಡೆ ಸಂಪೂರ್ಣ ಹಾಳಾಗಿದೆ. ಅದರ ದುರಸ್ತಿಗೆ ಇದೀಗ ಅನುದಾನ ಬಿಡುಗಡೆಯಾಗಿದ್ದು ಶೀಘ್ರ ಕಾಮಗಾರಿ ಪ್ರಾರಂಭಿಸಲಾಗುವುದು. ಪಟ್ಟಣದ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವು ಹಂತ ಹಂತವಾಗಿ ಬಿಡುಗಡೆಯಾಗಲಿದೆ ಎಂದರು.

ಸಭೆಯಲ್ಲಿ ಪ.ಪಂ. ಉಪಾಧ್ಯಕ್ಷೆ ಮಮತಾ, ಮುಖ್ಯಾಧಿಕಾರಿ ಮಂಜುಳಾ ದೇವಿ, ಎಂಜಿನಿಯರ್ ಬಿಂದುಸಾರ, ಪ.ಪಂ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.