ADVERTISEMENT

ಕೋವಿಡ್‌ ನಂತರ ದಾಖಲಾತಿ ಹೆಚ್ಚಳ: ಸರ್ಕಾರಿ ಶಾಲೆಗಳತ್ತ ಪೋಷಕರ ಆಸಕ್ತಿ

ಸ್ಮಾರ್ಟ್‌ಕ್ಲಾಸ್‌ಗಳಿಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 6:51 IST
Last Updated 28 ನವೆಂಬರ್ 2021, 6:51 IST
ಗುಬ್ಬಿ ತಾಲ್ಲೂಕು ನಿಟ್ಟೂರಿನ ಮಾದರಿ ಶಾಲೆ
ಗುಬ್ಬಿ ತಾಲ್ಲೂಕು ನಿಟ್ಟೂರಿನ ಮಾದರಿ ಶಾಲೆ   

ಗುಬ್ಬಿ: ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅನೇಕ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ.

ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಹೆಚ್ಚಾಗಿದ್ದು, ಖಾಸಗಿ ಶಾಲೆಗಳಿಂದ ಸುಮಾರು 700ರಿಂದ 800 ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಶಾಲೆಗೆ ದಾಖಲಾಗಿದ್ದಾರೆ.

ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದ್ದ ಸುಮಾರು 6 ಸರ್ಕಾರಿ ಶಾಲೆಗಳು ಪುನರಾರಂಭಗೊಂಡಿವೆ. ಇನ್ನೂ ಕೆಲವು ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆದಿದೆ.

ADVERTISEMENT

ನಿಟ್ಟೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನ ಪೂರೈಸದೆ. ಕೋವಿಡ್ ನಂತರ ಖಾಸಗಿ ಶಾಲೆಯಿಂದ ಸುಮಾರು 30 ಮಕ್ಕಳು ವಿವಿಧ ತರಗತಿಗಳಿಗೆ ದಾಖಲಾಗಿದ್ದಾರೆ. ಈ ಶಾಲೆಯಲ್ಲಿ ಕಂಪ್ಯೂಟರ್ ಹಾಗೂ ವಿಜ್ಞಾನ ಪ್ರಯೋಗಾಲಯಗಳಿವೆ. ಮಕ್ಕಳು ಆಟಕ್ಕೆ ವಿಶಾಲ ಮೈದಾನ ಇರುವುದರಿಂದ ಹೆಚ್ಚು ಆಕರ್ಷಕವಾಗಿದೆ.

ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಮಾಧ್ಯಮ ಆರಂಭವಾದರೆ ದಾಖಲಾತಿ ಇನ್ನೂ ಹೆಚ್ಚಲಿದೆ. ಜೊತೆಗೆ ಕೊರತೆ ಇರುವ ಕೊಠಡಿಗಳ ವ್ಯವಸ್ಥೆ ಮಾಡಿಕೊಡಬೇಕಾದ ಅಗತ್ಯವಿದೆ ಎನ್ನುತ್ತಾರೆ ಮುಖ್ಯಶಿಕ್ಷಕಿ ಲಕ್ಷ್ಮೀದೇವಮ್ಮ.

ಕಡಬದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಶತಮಾನ ಪೂರೈಸಿರುವ ಶಾಲೆಯಾಗಿದ್ದು, ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದಲ್ಲಿ ತರಗತಿ ನಡೆಸಲಾಗುತ್ತಿದೆ. ಕೋವಿಡ್ ನಂತರ ಖಾಸಗಿ ಶಾಲೆಯ ಸುಮಾರು 65ರಿಂದ 70 ವಿದ್ಯಾರ್ಥಿಗಳು ಈ ಶಾಲೆಗೆ ದಾಖಲಾಗಿದ್ದಾರೆ.

ವಿದೇಶದಲ್ಲಿರುವ ಅನಿವಾಸಿ ಕನ್ನಡಿಗರ ಎಂಜಿನಿಯರ್ ಗ್ರೂಪ್ ‘ಸೇವಾ ಕೆಫೆ’ ಸುಣ್ಣ-ಬಣ್ಣ ಬಳಿದು ಶಾಲೆಯ ಅಂದವನ್ನು ಹೆಚ್ಚಿಸಿರುವುದರ ಜೊತೆಗೆ ‘ಸ್ಮಾರ್ಟ್ ಕ್ಲಾಸ್’ ನಡೆಸುತ್ತಿದೆ. ಈ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದ್ದರೂ, ಅದನ್ನು ಸರಿದೂಗಿಸಲು ಸೇವಾಕೆಫೆ ಸದಸ್ಯರು ವಿದೇಶದಿಂದಲೇ ಆನ್‌ಲೈನ್‌ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ಗಣಿತ ಪಠ್ಯ ಬೋಧಿಸುತ್ತಿದ್ದಾರೆ. ವ್ಯಕ್ತಿತ್ವ ವಿಕಸನ ಹಾಗೂ ಕೌಶಲ ತರಬೇತಿ ನೀಡಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದು, ಈ ಶಾಲೆಯ ವಿದ್ಯಾರ್ಥಿಗಳು ವಾಲಿಬಾಲ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದಾರೆ.

ಹಾಗಲವಾಡಿ ಹೋಬಳಿ ಮಂಚಲದೊರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸಲಾಗಿದೆ. ಇಂಗ್ಲಿಷ್‌ ಮಾಧ್ಯಮದ ಕಲಿಕೆಗೆ ವಿದ್ಯಾರ್ಥಿಗಳು ಆಕರ್ಷಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.