ಪಾವಗಡ: ‘ತಾಲ್ಲೂಕಿನ ವೆಂಕಟಾಪುರ ಬಳಿ ಹಲವು ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿ ಗುರುವಾರ ರೈತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ವೆಂಕಟಾಪುರದ 27 ಎಕರೆ ಸರ್ಕಾರಿ ಜಮೀನಿನಲ್ಲಿ ಏಳು ಮಂದಿ ರೈತರು 30 ವರ್ಷಗಳಿಂದ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಜಮೀನು ಮಂಜೂರು ಮಾಡುವಂತೆ ಸುಮಾರು 20 ವರ್ಷಗಳ ಹಿಂದೆಯೇ ಅರ್ಜಿಯನ್ನೂ ಹಾಕಿದ್ದಾರೆ. ಆದರೆ ಏಕಾಏಕಿ ವ್ಯವಸಾಯ ಭೂಮಿಯನ್ನು ರೈತರಿಗೆ ಮಂಜೂರು ಮಾಡದೆ ನಿವೇಶನಗಳನ್ನಾಗಿ ಪರಿವರ್ತಿಸಲು ಅಧಿಕಾರಿಗಳು ಮುಂದಾಗಿರುವುದು ಖಂಡನೀಯ ಎಂದು ರಾಜ್ಯ ರೈತ ಸಂಘ, ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಪೂಜಾರಪ್ಪ ಆರೋಪಿಸಿದರು.
ರೈತ ಸಂಘದ ಸದಸ್ಯ ಈಶ್ವರ್, ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಅಧಿಕಾರಿಗಳು ರೈತರು ಉಳುಮೆ ಮಾಡುತ್ತಿರುವ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ಏಳು ಮಂದಿ ರೈತರಿಗೆ ಕೂಡಲೇ ಜಮೀನನ್ನು ಮಂಜೂರು ಮಾಡಬೇಕು ಎಂದರು.
ಕಂದಾಯ ಇಲಾಖೆ ಅಧಿಕಾರಿಗಳು ಜಮೀನನ್ನು ಉಳುಮೆ ಮಾಡುತ್ತಿರುವ ರೈತರಿಗೆ ಮಂಜೂರು ಮಾಡಿ ಆದೇಶ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಬ್ಯಾಡನೂರು ಶಿವು, ರೈತ ಮುಖಂಡ ಈಶ್ವರ್, ನಾಗೇಂದ್ರಪ್ಪ ಮಲ್ಲಿಕಾರ್ಜುನ, ಹನುಮಂತರಾಯಪ್ಪ, ಭಾರತಮ್ಮ, ಸುನಿತಾ ಲಕ್ಷ್ಮಿ, ಅಕ್ಕಲಪ್ಪ, ಕಿಲಾರ್ಲಹಳ್ಳಿ ಈರಣ್ಣ, ತಿಪ್ಪೇ ನಾಯ್ಕ, ಗೋಪಾಲ್, ಸತ್ಯಪ್ಪ, ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.