ತುಮಕೂರು: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬೆಳವಣಿಗೆಯಿಂದ ನಿರುದ್ಯೋಗ ಹೆಚ್ಚಾಗಲಿದೆ ಎಂಬುದು ತಪ್ಪು ತಿಳಿವಳಿಕೆ. ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಐಐಐಟಿ ಧಾರವಾಡ ನಿರ್ದೇಶಕ ಎಸ್.ಆರ್.ಮಹದೇವ ಪ್ರಸನ್ನ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ಎಐಸಿಟಿಇ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಕೃತಕ ಬುದ್ಧಿಮತ್ತೆ ಕುರಿತ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಕಂಪ್ಯೂಟರ್ ಬಳಕೆಗೆ ಬಂದ ಸಮಯದಲ್ಲೂ ನಿರುದ್ಯೋಗದ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಪ್ರಸ್ತುತ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿ ಬೆಳವಣಿಗೆ ಸಾಧಿಸಿದೆ. ಅದೇ ಮಾರ್ಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಸಾಗುವ ವಿಶ್ವಾಸವಿದೆ ಎಂದರು.
ಎಐಎಂಎಲ್ ಹಾಗೂ ಕಂಪ್ಯೂಟರ್ ಎಂಜಿನಿಯರಿಂಗ್ ಒಂದಕ್ಕೊಂದು ಪೂರಕವಾಗಿದೆ. ಸ್ವಾಫ್ಟ್‌ವೇರ್ ಎಂಜಿನಿಯರ್‌ಗಿಂತ ವೇಗವಾಗಿ, ನಿಖರವಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕೆಲಸ ಮಾಡಲಿದೆ. ಎಐಎಂಎಲ್ ಬಳಕೆಯಿಂದ ಸರಾಗವಾಗಿ ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡುವ ಅವಕಾಶ ಸಿಗಲಿದೆ ಎಂದು ಹೇಳಿದರು.
ವಿಷಯ ಮಂಡಿಸಿದ ವಿಷಯ ತಜ್ಞ ಮಹೇಶ್ ಪಂಡಿತ್, ‘ಕೈಗಾರಿಕೆ– ಶಿಕ್ಷಣದ ನಡುವಿನ ಅಂತರವನ್ನು ಕಡಿಮೆ ಮಾಡಬೇಕಿದೆ. ಉನ್ನತ ಶಿಕ್ಷಣದ ಗುಣಮಟ್ಟ ಮತ್ತಷ್ಟು ಸುಧಾರಿಸಬೇಕಿದೆ. ಎಐಎಂಎಲ್ ಬಳಕೆಯಿಂದ ತಂತ್ರಜ್ಞಾನ ಆಧಾರಿತ ಭಾರತ ನಿರ್ಮಾಣ ಸಾಧ್ಯವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಶಿವಕುಮಾರಯ್ಯ, ಸಂಸ್ಥೆ ಕಾರ್ಯದರ್ಶಿ ಟಿ.ಕೆ.ನಂಜುಂಡಪ್ಪ, ಕಾಲೇಜು ಪ್ರಾಂಶುಪಾಲ ನಿಜಲಿಂಗಪ್ಪ, ಸಂಯೋಜಕಿ ಪ್ರೊ.ಎಂ.ಮಮತ, ಪ್ರೊ.ಕೆ.ಎಸ್.ಲಿಂಗದೇವರಪ್ಪ, ಹೇಮಲತಾ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.