
ತುಮಕೂರು: ನಗರದ ಅಮಾನಿಕೆರೆ ಹಲವು ಚಟುವಟಿಕೆಗಳ ಮೂಲಕ ಪ್ರವಾಸಿ ತಾಣವಾಗಿ ಬದಲಾಗುತ್ತಿದೆ. ಇಲ್ಲಿ ಜನರನ್ನು ಸೆಳೆಯಲು ಸದಾ ಒಂದಲ್ಲೊಂದು ಯೋಜನೆ ರೂಪಿಸುತ್ತಿದ್ದು, ಇದೀಗ ಹೊಸದಾಗಿ ‘ಜಿಪ್ ಲೈನ್’ ಅಳವಡಿಸಲಾಗಿದೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿ ನಡೆದಿದ್ದು, ನವೆಂಬರ್ ಮೊದಲ ವಾರದಲ್ಲಿ ಸಾರ್ವಜನಿಕರ ಬಳಕೆಗೆ ನೀಡಲಾಗುತ್ತದೆ. ಪ್ರವಾಸಿಗರು ಜಿಪ್ ಲೈನ್ ರೈಡ್ ಮೂಲಕ ಕೆರೆಯ ಸೌಂದರ್ಯ ಕಣ್ತುಂಬಿಕೊಳ್ಳಬಹುದು. ಸುಮಾರು 300 ಮೀಟರ್ ರೈಡ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನ್ನಡ ರಾಜ್ಯೋತ್ಸವ ಸಮಯದಲ್ಲಿ ಜಿಪ್ ಲೈನ್ ರೈಡ್‌ಗೆ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅಮಾನಿಕೆರೆಯಲ್ಲಿ ಈಗಾಗಲೇ ಬೋಟಿಂಗ್ ಶುರುವಾಗಿದ್ದು, ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅಕ್ಟೋಬರ್ ತಿಂಗಳು ಪ್ರಾರಂಭದಿಂದ ಈವರೆಗೆ 6 ಸಾವಿರ ಮಂದಿ ಬೋಟ್‌ನಲ್ಲಿ ಸಂಚರಿಸಿದ್ದಾರೆ. ಆ. 15ರಂದು ಸ್ವಾತಂತ್ರ್ಯ ದಿನಾಚರಣೆ ದಿನ ಬೋಟಿಂಗ್ ಪ್ರಾರಂಭಿಸಲಾಗಿತ್ತು. ‘ತುಮಕೂರು ದಸರಾ’ ವೇಳೆ ಹೆಚ್ಚಿನ ಜನರು ಕೆರೆಗೆ ಭೇಟಿ ನೀಡಿ ದೋಣಿ ವಿಹಾರ ನಡೆಸಿದ್ದರು. ದಸರಾ ರಜಾ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಜನರು ಅಮಾನಿಕೆರೆಯತ್ತ ಹೆಜ್ಜೆ ಹಾಕಿದ್ದರು. ಇದರ ನಂತರವೂ ಜನರ ಓಡಾಟ ಕಡಿಮೆಯಾಗಿಲ್ಲ.
₹9.47 ಲಕ್ಷ ಸಂಗ್ರಹ: ಸೆ. 30ರಿಂದ ಅ. 26ರ ವರೆಗೆ ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 6,466 ಮಂದಿ ಬೋಟ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು ₹9,47,825 ಹಣ ಸಂಗ್ರಹವಾಗಿದೆ. ದಿನಕ್ಕೆ 300ರಿಂದ 500 ಜನರು ದೋಣಿ ವಿಹಾರ ಮಾಡಿದಂತಾಗಿದೆ.
ಕೆರೆಯಲ್ಲಿ ಗಾಜಿನ ಸೇತುವೆ ನಿರ್ಮಾಣಕ್ಕೂ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಇದಕ್ಕಾಗಿ ₹25 ಕೋಟಿ ವೆಚ್ಚ ಮಾಡಲಾಗುತ್ತಿದೆ. ಕಾಮಗಾರಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹9 ಕೋಟಿ ಲಭ್ಯವಿದ್ದು, ಹೆಚ್ಚಿನ ಅನುದಾನ ಬಿಡುಗಡೆಗಾಗಿ ಅಧಿಕಾರಿಗಳು ಸರ್ಕಾರ, ಮಹಾನಗರ ಪಾಲಿಕೆಯ ಮೊರೆ ಹೋಗಿದ್ದಾರೆ. ಸೇತುವೆ ನಿರ್ಮಾಣವಾದರೆ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಅಮಾನಿಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತಿದೆ. ಈ ಹಿಂದೆ ಸ್ಮಾರ್ಟ್ ಸಿಟಿ ಯೋಜನೆಯಡಿ ನೂರಾರು ಕೋಟಿ ವೆಚ್ಚದಲ್ಲಿ ಹಲವು ಕಾಮಗಾರಿ ನಡೆಸಲಾಗಿತ್ತು. ನಗರ ವಿಕಾಸ ಯೋಜನೆಯಡಿ ಮತ್ತಷ್ಟು ಕಾಮಗಾರಿ ಆರಂಭಕ್ಕೆ ನೀಲನಕ್ಷೆ ರೂಪಿಸಲಾಗಿದೆ.
ಜಿಪ್ ಲೈನ್ ರೈಡ್‌ಗೆ ಇನ್ನೂ ಶುಲ್ಕ ನಿಗದಿ ಪಡಿಸಿಲ್ಲ. ಆರಂಭವಾದ ನಂತರ ಗುತ್ತಿಗೆ ಪಡೆದ ಸಂಸ್ಥೆ ಜತೆಗೆ ಚರ್ಚಿಸಿ ಒಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಎನ್.ಆರ್.ಉಮೇಶ್‌ಚಂದ್ರ ಪ್ರತಿಕ್ರಿಯಿಸಿದರು. ಕೆರೆಯಲ್ಲಿ ಬೋಟಿಂಗ್ ನಡೆಸಲು ಗುತ್ತಿಗೆ ಪಡೆದ ಸಂಸ್ಥೆಯೇ ಜಿಪ್ ಲೈನ್ ಕಾಮಗಾರಿ ಪೂರ್ಣಗೊಳಿಸಿದೆ. 5 ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ. ಸಂಸ್ಥೆಯಿಂದ ವರ್ಷಕ್ಕೆ ₹5 ಲಕ್ಷ ಶುಲ್ಕ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.