ADVERTISEMENT

‘ಆಶಾ’ರಿಂದ ಆರೋಗ್ಯ ಸೇವೆ ಸ್ಥಗಿತ

ಮಾಸಿಕ ₹12 ಸಾವಿರ ಗೌರವ ಧನ ಖಾತರಿಪಡಿಸಿ, ಕೊರೊನಾ ವಾರಿಯರ್ಸ್ ಪ್ಯಾಕೇಜ್ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 14:59 IST
Last Updated 10 ಜುಲೈ 2020, 14:59 IST
ಆರೋಗ್ಯ ಸೇವೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು
ಆರೋಗ್ಯ ಸೇವೆ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಆಶಾ ಕಾರ್ಯಕರ್ತೆಯರು   

ತುಮಕೂರು: ಮಾಸಿಕ ₹12 ಸಾವಿರ ಗೌರವ ಧನ ಖಾತರಿಪಡಿಸಬೇಕು, ಕೊರೊನಾ ವಿರುದ್ಧದ ಕೆಲಸಕ್ಕೆ ಅಗತ್ಯವಿರುವಷ್ಟು ರಕ್ಷಣಾ ಸಾಮಗ್ರಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಶುಕ್ರವಾರದಿಂದ ಆರೋಗ್ಯ ಸೇವೆ ಸ್ಥಗಿತಗೊಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಭಿತ್ತಿಪತ್ರಗಳನ್ನು ಹಿಡಿದು ಪ್ರತಿಭಟಿಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೊರೊನಾ ವಾರಿಯರ್ಸ್ ಪ್ಯಾಕೇಜ್ ₹2 ಸಾವಿರ ಮತ್ತು ₹ 3 ಸಾವಿರವನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆ ನೀಡಬೇಕು. ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

ಆಶಾ ಕಾರ್ಯಕರ್ತೆಯರು ಆಯಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ, ತಾಲ್ಲೂಕು ಆರೋಗ್ಯ ಕೇಂದ್ರಗಳಲ್ಲಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಬೇಡಿಕೆ ಈಡೇರುವವರೆಗೂ ಕೆಲಸ ಬಹಿಷ್ಕರಿಸುವುದಾಗಿ ತಿಳಿಸಿದರು.

ADVERTISEMENT

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್ 30ರಂದು ರಾಜ್ಯದಾದ್ಯಂತ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಆದರೆ ಬೇಡಿಕೆಗಳು ಇನ್ನೂ ಈಡೇರದೆ ಸೇವೆ ಸ್ಥಗಿತಗೊಳಿಸಿ ಹೋರಾಟ ತೀವ್ರಗೊಳಿಸಲಾಗಿದೆ ಎಂದು ಸಂಘಟನೆ ಜಿಲ್ಲಾ ಸಂಚಾಲಕಿ ಮಂಜುಳಾ ಎಸ್.ಗೋನವಾರ ತಿಳಿಸಿದರು.

ಕಳೆದ ಒಂದು ವಾರದಿಂದ ಆಶಾ ಕಾರ್ಯಕರ್ತೆಯರು ಎಲ್ಲ ಜಿಲ್ಲಾಧಿಕಾರಿಗಳು, ತಹಶೀಲ್ದಾರ್‌, ಸಚಿವರಿಗೆ ಬೇಡಿಕೆ ಈಡೇರಿಕೆ ಸಂಬಂಧ ಮನವಿ ಸಲ್ಲಿಸಿದ್ದಾರೆ. ಜನವರಿಯಿಂದ ಇಲ್ಲಿಯವರೆಗೂ ಸುಮಾರು 10 ಮನವಿ ಪತ್ರವನ್ನು ಸಲ್ಲಿಸಿದ್ದರೂ ಕನಿಷ್ಠ ಪಕ್ಷ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಚರ್ಚಿಸಲು ಸಭೆಯನ್ನು ಕರೆಯುವ ಪ್ರಸ್ತಾಪವನ್ನೂ ಸರ್ಕಾರ ಮುಂದಿಟ್ಟಿಲ್ಲ. ಬೇರೆ ದಾರಿ ಇಲ್ಲದೆ ಕೆಲಸ ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.