ಕುಣಿಗಲ್: ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ 17ನೇ ವಾರ್ಡ್ ಸದಸ್ಯೆ ಕಾಂಗ್ರೆಸ್‌ನ ಆಸ್ಮಾ ಆಯ್ಕೆಯಾಗುವ ಮೂಲಕ ಪುರಸಭೆ ಇತಿಹಾಸದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆಯಾಗಿದ್ದಾರೆ.
ಪುರಸಭೆ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯ ಪ್ರಾರಂಭದಲ್ಲಿ ಕೆಲ ಸದಸ್ಯರ ಆಕ್ಷೇಪದೊಂದಿಗೆ ಗೊಂದಲವಾದರೂ ನಂತರ ಸಭೆ ಸುಗಮವಾಗಿ ನಡೆದು ಸ್ಥಾಯಿ ಸಮಿತಿ ರಚನೆ ಮತ್ತು ಅಧ್ಯಕ್ಷರ ಆಯ್ಕೆ ನಡೆಯಿತು.
ಸದಸ್ಯ ರಂಗಸ್ವಾಮಿ, ಶಾಸಕರ ಸೂಚನೆ ಮೇರೆಗೆ ಸರ್ವಪಕ್ಷದ ಸದಸ್ಯರನ್ನು ಸೇರಿ ಸ್ಥಾಯಿ ಸಮಿತಿ ರಚಿಸಿ, ಆಸ್ಮಾರವರನ್ನು ಅಧ್ಯಕ್ಷೆ ಸ್ಥಾನಕ್ಕೆ ಸೂಚಿಸಿದರು. ಸದಸ್ಯ ಅರುಣ್ ಕುಮಾರ್ ಅನುಮೋದಿಸಿದಾಗ ಸದಸ್ಯ ರಾಮು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಮೊದಲು ಸ್ಥಾಯಿ ಸಮಿತಿ ರಚನೆಯಾಗಬೇಕು. ಸಮಿತಿ ಸದಸ್ಯರು ಸೇರಿ ಅಧ್ಯಕ್ಷರ ಆಯ್ಕೆಮಾಡಿಕೊಳ್ಳಬೇಕಿದೆ. ಸ್ಥಾಯಿ ಸಮಿತಿ ರಚನೆಯಾಗಿದೆ ಆದರೆ ಸಭೆಗೆ ಗೈರು ಹಾಜರಾಗಿರುವ ಸದಸ್ಯರನ್ನು ಸಮಿತಿಗೆ ಆಯ್ಕೆ ಮಾಡಿರುವುದು ಸರಿಯಲ್ಲ. ಸಮಿತಿ ಸದಸ್ಯರು ಸೇರಿ ಅಧ್ಯಕ್ಷರ ಆಯ್ಕೆ ಮಾಡುವ ಬದಲು ಮೊದಲೇ ಅಧ್ಯಕ್ಷರ ಆಯ್ಕೆ ಘೋಷಣೆ ನಿಯಮ ಬಾಹಿರ ಎಲ್ಲವೂ ಪೂರ್ವನಿಯೋಜಿತವಾಗಿ ನಡೆಯುತ್ತಿದೆ ಎಂದು ದೂರಿದರು.
ಸಭೆಯಲ್ಲಿದ್ದ ಸದಸ್ಯ ಉದಯ್, ನಾಗೇಂದ್ರ ಅವರು ಸ್ಥಾಯಿ ಸಮಿತಿಗೆ ಸೇರಲು ನಿರಾಕರಿಸಿದ ಕಾರಣ ಸಭೆಯಲ್ಲಿದ್ದವರೊಂದಿಗೆ ಚರ್ಚಿಸಿ ಸಮಿತಿಗೆ ಸೇರಿಸಿದ ನಂತರ ಆಸ್ಮಾ ಅವರ ಆಯ್ಕೆ ಘೋಷಿಸಲಾಯಿತು.
ಉಪಾದ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಮುಖ್ಯಾಧಿಕಾರಿ ಮಂಜುಳಾ, ಪರಿಸರ ಎಂಜನಿಯರ್ ಚಂದ್ರಶೇಖರ್ ಮತ್ತು ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.