ADVERTISEMENT

ಕಾಂಗ್ರೆಸ್‌ ಮುಖಂಡನ ಮೇಲೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಶ್ರೀನಿವಾಸ್‌ ಹಲ್ಲೆ?

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2024, 4:19 IST
Last Updated 15 ಮಾರ್ಚ್ 2024, 4:19 IST
   

ತುಮಕೂರು: ‘ಟೆಂಡರ್‌ನಲ್ಲಿ ನನಗೆ ಅನ್ಯಾಯವಾಗಿದೆ ಎಂದು ಪ್ರತಿಭಟನೆ ನಡೆಸಿದ್ದಕ್ಕೆ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಶ್ರೀನಿವಾಸ್‌ ಮತ್ತು ಅವರ ಬೆಂಬಲಿಗರು ಗುರುವಾರ ರಾತ್ರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಕಾಂಗ್ರೆಸ್‌ ಪ್ರಚಾರ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್‌ ಆರೋಪಿಸಿದ್ದಾರೆ.

ಘಟನೆಯ ಬಳಿಕ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿ, ‘ಗುಬ್ಬಿ, ತಿಪಟೂರು ತಾಲ್ಲೂಕಿನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ತುಮಕೂರಿನ ಪಂಚಾಯತ್‌ರಾಜ್‌ ವಿಭಾಗದಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಟೆಂಡರ್‌ ಕರೆದಿದ್ದರು. ನಾನು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಾಂತ್ರಿಕ, ಆರ್ಥಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದೆ. ನಂತರ ಅನುಮೋದನೆ ಸಮಯದಲ್ಲಿ ನನಗೆ ಟೆಂಡರ್‌ ತಪ್ಪಿಸಿದ್ದಾರೆ’ ಎಂದರು.

ಇದನ್ನು ವಿರೋಧಿಸಿ ಲೋಕೋಪಯೋಗಿ ಇಲಾಖೆಯ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುವ ಸಮಯದಲ್ಲಿ ಶ್ರೀನಿವಾಸ್‌, ಅವರ ಬೆಂಬಲಿಗರು ಸ್ಥಳಕ್ಕೆ ಬಂದು ಹಲ್ಲೆ ಮಾಡಿದ್ದಾರೆ. ದೊಣ್ಣೆ, ಮಚ್ಚು, ಲಾಂಗ್‌ನಿಂದ ಹೊಡೆದಿದ್ದಾರೆ. ಅಪಹರಣ ಮಾಡಲು ಯತ್ನಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.

ADVERTISEMENT

‘ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಬಂದರೆ ನಿನ್ನ ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾರೆ. ಶಾಸಕರು ಗೂಂಡಾ ರೀತಿ ವರ್ತಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಜಿಲ್ಲೆಯಲ್ಲಿ ಗುತ್ತಿಗೆದಾರರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾನೂನು ಪ್ರಕಾರ ಆಗಿರುವ ಟೆಂಡರ್‌ ಕರಾರು ಮಾಡಿಕೊಟ್ಟು ಕೆಲಸ ಮಾಡಲು ಅವಕಾಶ ಕಲ್ಪಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಇತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ಠಾಣೆಯಲ್ಲಿ ರಕ್ಷಣೆ

ಹಲ್ಲೆಯ ಸಮಯದಲ್ಲಿ ತಪ್ಪಿಸಿಕೊಂಡು ಓಡಿ ಹೋಗಿ ತಿಲಕ್‌ಪಾರ್ಕ್‌ ಠಾಣೆಯಲ್ಲಿ ರಕ್ಷಣೆ ಪಡೆದಿದ್ದಕ್ಕೆ ನಾನು ಉಳಿದಿದ್ದೇನೆ. ನನ್ನ ರಕ್ಷಣೆಗೆ ಧಾವಿಸಿದ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ್ದಾರೆ ಎಂದು ರವಿಕುಮಾರ್‌ ದೂರಿದರು.

ನಾನು ಕಾರ್ಯಪಾಲಕ ಎಂಜಿನಿಯರ್‌ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ. ‘ಕುಂಬಳಕಾಯಿ ಕಳ್ಳ ಎಂದರೆ ಶ್ರೀನಿವಾಸ್‌ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ’. ‘ನನ್ನ ಕ್ಷೇತ್ರಕ್ಕೆ ನೀನು ಹೇಗೆ ಟೆಂಡರ್‌ ಹಾಕಿದೆ? ನಿನ್ನನ್ನು ಕೆಲಸ ಮಾಡಲು ಬಿಡುವುದಿಲ್ಲ’ ಎಂದು ಶ್ರೀನಿವಾಸ್‌ ಹಲ್ಲೆ ನಡೆಸಿದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.