ADVERTISEMENT

ರೌಡಿ ಶೀಟರ್ ಮೇಲೆ ಹಲ್ಲೆ; ಬಂಧನ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:20 IST
Last Updated 6 ಜನವರಿ 2020, 12:20 IST

ಗೌರಿಬಿದನೂರು: ತನ್ನ ಪತ್ನಿ ಜತೆ ಅಸಭ್ಯವಾಗಿ ಮಾತನಾಡಿದ ಎಂದು ಹಳೇ ಉಪ್ಪಾರಹಳ್ಳಿ ಗ್ರಾಮದ ರೌಡಿಶೀಟರ್ ರಮೇಶ್ ಮೇಲೆ ಮುದುಗೆರೆ ಗ್ರಾಮದ ವಿಶ್ವ ಎಂಬಾತ ಕುಡಗೋಲಿನಿಂದ ಹಲ್ಲೆ ಮಾಡಿರುವ ಘಟನೆ ತಾಲ್ಲೂಕಿನ ಕೋಟಾಲದಿನ್ನೆ ಗ್ರಾಮದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

ಭಾನುವಾರ ರಾತ್ರಿ ಕೋಟಾಲದಿನ್ನೆ ಬಾರ್ ಬಳಿ ಗುಂಪು ಕಟ್ಟಿಕೊಂಡು ಮದ್ಯಪಾನ ಮಾಡುತ್ತಿದ್ದ ರೌಡಿಶೀಟರ್ ರಮೇಶ್ ಹಾಗೂ ಆತನ ತಂಡ ಚಿಕನ್ ಖರೀದಿಗೆ ಬಂದಿದ್ದ ವಿಶ್ವನನ್ನು ಕರೆದಿದ್ದಾರೆ. ಈ ವೇಳೆ ಅವರ ಬಳಿಗೆ ಬರಲು ನಿರಾಕರಿಸಿದಾಗ ರಮೇಶ್ ಆತನ ಬಳಿ ಬಂದು ಮೊಬೈಲ್ ಕಸಿದುಕೊಂಡು ಹಣ ಕೊಡುವಂತೆ ಪೀಡಿಸಿದ್ದಾನೆ. ಹಣ ಇಲ್ಲ ಮೊಬೈಲ್ ಹೋದರೆ ಹೋಗಲಿ ಜಗಳ ಯಾಕೆ ಎಂದು ವಿಶ್ವ ಮನೆ ಕಡೆಗೆ ಹೋಗಿದ್ದಾನೆ.

ತಡರಾತ್ರಿಯಾದರೂ ವಿಶ್ವ ಮನೆಗೆ ಬಾರದೇ ಇರುವುದರಿಂದ ಪತ್ನಿ ಮೊಬೈಲ್‍ಗೆ ಕಾಲ್ ಮಾಡಿದ್ದರು. ಆಗ ಮೊಬೈಲ್ ರಮೇಶ್‍ ಬಳಿ ಇದ್ದ ಕಾರಣ ಆತನೇ ಕರೆ ಸ್ವೀಕರಿಸಿ, ಅಸಭ್ಯವಾಗಿ ಮಾತನಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ADVERTISEMENT

ಈ ವೇಳೆ ಮನೆಗೆ ಹೋದ ಪತಿಯ ಬಳಿ ರಮೇಶ್ ಮಾತನಾಡಿದ್ದನ್ನು ಪತ್ನಿ ಹೇಳಿದ್ದಾಳೆ. ಇದರಿಂದ ರೊಚ್ಚಿಗೆದ್ದ ವಿಶ್ವ ಕುಡುಗೋಲು ತೆಗೆದುಕೊಂಡು ರಮೇಶ್‍ನ ಬಳಿಗೆ ತೆರಳಿ ಆತನ ತಲೆಗೆ ಕುಡುಗೋಲಿನಿಂದ ಹೊಡೆದಿದ್ದಾನೆ. ಪರಿಣಾಮ ರಮೇಶ್ ತಲೆಯ ಕೆಳಭಾಗ ಹಾಗೂ ಕತ್ತಿಗೆ ಗಂಭೀರ ಗಾಯವಾಗಿದೆ.

ರಮೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ನಂತರ ಪರಾರಿಯಾಗಿದ್ದ ವಿಶ್ವನನ್ನು ಪೊಲೀಸರುಬಂಧಿಸಿದ್ದಾರೆ.

ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಮರೆಡ್ಡಿ ಕೊಲೆ ಆರೋಪಿ: ಗಾಯಗೊಂಡಿರುವ ರೌಡಿಶೀಟರ್ ರಮೇಶ್ ಕಳೆದ ವಿಧಾನಸಭಾ ಚುನಾವಣೆ ವೇಳೆ ಕೋಟಾಲದಿನ್ನೆ ಬಾರ್ ಬಳಿ ನಡೆದಿದ್ದ ಜೆಡಿಎಸ್ ಕಾರ್ಯಕರ್ತ ರಾಮರೆಡ್ಡಿ ಕೊಲೆ ಪ್ರಕರಣದ ಎ1 ಆರೋಪಿಯಾಗಿದ್ದಾನೆ. ಪ್ರಕರಣದಲ್ಲಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದನು. ಬಳಿಕ ಹಲವರ ಬಳಿ ಇದೇ ರೀತಿ ದುಡ್ಡಿಗಾಗಿ ಪೀಡಿಸಿ, ಜಗಳ ಮಾಡಿಕೊಂಡು ಓಡಾಡುತ್ತಿದ್ದನು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.