ADVERTISEMENT

ತುಮಕೂರು | ಒಳಮೀಸಲು ವರದಿ: ‘ಬಲಗೈ’ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:51 IST
Last Updated 15 ಆಗಸ್ಟ್ 2025, 5:51 IST
ಸಿ.ಭಾನುಪ್ರಕಾಶ್
ಸಿ.ಭಾನುಪ್ರಕಾಶ್   

ತುಮಕೂರು: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ಸಲ್ಲಿಸಿರುವ ವರದಿಗೆ ‘ಬಲಗೈ’ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ.

ನಾಗಮೋಹನದಾಸ್ ಸಲ್ಲಿಸಿರುವ ವರದಿ ಅವೈಜ್ಞಾನಿಕವಾಗಿದ್ದು, ದೋಷದಿಂದ ಕೂಡಿದೆ. ಹಾಗಾಗಿ ವರದಿ ಪರಿಷ್ಕರಿಸಲು ಉಪಸಮಿತಿ ರಚಿಸುವಂತೆ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ಸಂಚಾಲಕ ಸಿ.ಭಾನುಪ್ರಕಾಶ್ ಇಲ್ಲಿ ಗುರುವಾರ ಒತ್ತಾಯಿಸಿದರು.

ಬಲಗೈ ಸಮುದಾಯದ ಜನ ಸಂಖ್ಯೆಯನ್ನು ಕಡಿಮೆ ತೋರಿಸಿದ್ದು, ನಮ್ಮ ಜಾತಿಯವರಿಗೆ ಅನ್ಯಾಯ ಮಾಡಲಾಗಿದೆ. ನಮ್ಮ ಸಮುದಾಯದ ಜತೆ ಗುರುತಿಸಿಕೊಂಡಿದ್ದ ಕೆಲವು ಜಾತಿಗಳನ್ನು ಎಡಗೈ ಸಮುದಾಯದ ಪ್ರವರ್ಗಕ್ಕೆ ಸೇರಿಸಿ ಅನ್ಯಾಯ ಮಾಡಲಾಗಿದೆ. ಈ ಬಗ್ಗೆ ನಾವು ಆಯೋಗಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ. ಈ ವರದಿ ಜಾರಿ ಮಾಡಿದರೆ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದ್ದು, ವರದಿ ಪರಿಷ್ಕರಿಸಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ADVERTISEMENT

ನಾಗಮೋಹನದಾಸ್ ಸಮಿತಿ ರಚನೆಗೂ ಮುನ್ನ ರಾಜ್ಯದಲ್ಲಿ 1.38 ಕೋಟಿ ಪರಿಶಿಷ್ಟ ಜಾತಿ ಜನ ಸಂಖ್ಯೆ ಇದೆ ಎಂದು ತೋರಿಸಲಾಗಿತ್ತು. ಆದರೆ ಸಮೀಕ್ಷೆಯಲ್ಲಿ 1.5 ಕೋಟಿ ಜನರಷ್ಟೇ ಭಾಗಿಯಾಗಿದ್ದು, ಇನ್ನೂ 33 ಲಕ್ಷ ಮಂದಿ ಹೊರಗುಳಿದಿದ್ದಾರೆ. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮುದಾಯಗಳ ಬಗ್ಗೆ ಸ್ಪಷ್ಟ ನಿಲುವು ವ್ಯಕ್ತಪಡಿಸದೆ, ವರದಿಯಲ್ಲಿ ಗೊಂದಲ ಮೂಡಿಸಲಾಗಿದೆ. ಈ ಸಮುದಾಯಗಳಿಗೆ ಶೇ 1ರಷ್ಟು ಮೀಸಲಾತಿ ಹಂಚಿಕೆ ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಒಳಮೀಸಲಾತಿ ವರದಿಯನ್ನು ಅಂಗೀಕರಿಸಿ, ಆಗಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಎಡ–ಬಲ ಜಾತಿಗಳನ್ನು ವೈಜ್ಞಾನಿಕವಾಗಿ ವಿಂಗಡಿಸಿ, ಒಳಮೀಸಲಾತಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಶ್ರೀನಿವಾಸ್, ‘ಒಳಮೀಸಲಾತಿ ಸಮೀಕ್ಷೆ ಸಂದರ್ಭದಲ್ಲಿ ಸಮೀಕ್ಷೆದಾರರಿಗೆ ಸರಿಯಾದ ರೀತಿಯಲ್ಲಿ ತರಬೇತಿ ನೀಡದೆ ಸಮೀಕ್ಷೆ ನಡೆಸಲಾಗಿದೆ. ಬೆಂಗಳೂರು ನಗರದಲ್ಲಿ ಶೇ 53ರಷ್ಟು ಜನರು ಮಾತ್ರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದು, ಇದರಿಂದ ಸಾಕಷ್ಟು ಅನ್ಯಾಯವಾಗಲಿದೆ. ಹಾಗಾಗಿ ಮತ್ತೊಮ್ಮೆ ಪರಿಶೀಲನೆ ನಡೆಸಿ, ಸಮುದಾಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು’ ಎಂದು ಮನವಿ ಮಾಡಿದರು.

ಸಮುದಾಯದ ಮುಖಂಡರಾದ ಪಿ.ಚಂದ್ರಪ್ಪ, ನಿರಂಜನ್, ಕುಣಿಗಲ್ ಚಿಕ್ಕಣ್ಣ, ಗಂಗಾಂಜನೇಯ, ಗಿರೀಶ್, ಹೆಗ್ಗೆರೆ ಕೃಷ್ಣಮೂರ್ತಿ, ರಜನಿಕಾಂತ್, ಸಿದ್ದಲಿಂಗಪ್ಪ, ಛಲವಾದಿ ಶೇಖರ್, ಯಲ್ಲಪ್ಪ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.