ತುಮಕೂರು: ಕನಿಷ್ಠ ವೇತನ ₹35 ಸಾವಿರ ನಿಗದಿ, ಬೀಡಿ ಕಾರ್ಮಿಕರ ವೇತನ ಕಡಿತ ಆದೇಶ ಹಿಂಪಡೆಯುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜುಲೈ 28ರಂದು ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಕಾರ್ಮಿಕರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
‘ರಾಜ್ಯದಲ್ಲಿ ಸುಮಾರು 2.50 ಕೋಟಿ ಅಕುಶಲ ಕಾರ್ಮಿಕರಿದ್ದಾರೆ. ಅವರಿಗೆ ಕನಿಷ್ಠ ವೇತನದ ಬಗ್ಗೆ ಸರಿಯಾದ ಮಾನದಂಡ ಇಲ್ಲ. 2018ರ ಕನಿಷ್ಠ ವೇತನ ಕಾಯ್ದೆ ಜಾರಿಗೆ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಇದರ ವಿರುದ್ಧ ಇಡೀ ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ನೀಡಲಾಗಿದೆ’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್ ಇಲ್ಲಿ ಶನಿವಾರ ಹೇಳಿದರು.
ಬಿಡಿ ಕಾರ್ಮಿಕರ ಕನಿಷ್ಠ ವೇತನ ಕಾಯ್ದೆ 1948ರ ಕಲಂ 5(1) ಬಿ ಬದಲಾಗಿ, 5(1) ಎ ಜಾರಿಗೆ ಪೂರ್ವಾನುಮತಿ ನೀಡಲಾಗಿದೆ. ನ್ಯಾಯಾಲಯದ ಮೂಲಕ ಕಾರ್ಮಿಕರ ಹಕ್ಕು ಕಸಿಯಲಾಗುತ್ತಿದೆ. ಈ ನೀತಿಯಿಂದ ಸುಮಾರು 8.50 ಲಕ್ಷ ಬಿಡಿ ಕಾರ್ಮಿಕರಿಗೆ ಅನ್ಯಾಯವಾಗಲಿದೆ. ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ರಾಜಕಾರಣಿಗಳು ತಮ್ಮ ವೇತನ ಹೆಚ್ಚಿಸಿಕೊಂಡಿದ್ದಾರೆ. ದಿನಗೂಲಿ ನೌಕರರ ವೇತನ ಕಡಿತ ಮಾಡುವುದು ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಕಮಲ, ಎನ್.ಕೆ.ಸುಬ್ರಮಣ್ಯ, ಬಿ.ಉಮೇಶ್, ನಾಗೇಶ್, ನಾಗರತ್ನ, ಸುಜಾತಾ, ಮಧು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.