ADVERTISEMENT

ತುಮಕೂರು| ಬಿಜೆಪಿ ಪ್ರಗತಿ ರಥಯಾತ್ರೆ ಆರಂಭ

ಮಾಜಿ ಶಾಸಕ ಸೊಗಡು ಶಿವಣ್ಣ ಪ್ರತ್ಯೇಕ ಪ್ರಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2023, 15:18 IST
Last Updated 2 ಮಾರ್ಚ್ 2023, 15:18 IST
ತುಮಕೂರಿನಲ್ಲಿ ಗುರುವಾರ ಬಿಜೆಪಿ ‘ಪ್ರಗತಿ ರಥ’ಯಾತ್ರೆ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಗುರುವಾರ ಬಿಜೆಪಿ ‘ಪ್ರಗತಿ ರಥ’ಯಾತ್ರೆ ನಡೆಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಇತರರು ಭಾಗವಹಿಸಿದ್ದರು   

ತುಮಕೂರು: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಮುಂದುವರಿದ ಭಾಗವಾಗಿ ಹಮ್ಮಿಕೊಂಡಿರುವ ‘ಪ್ರಗತಿ ರಥ’ಯಾತ್ರೆಗೆ ಗುರುವಾರ ನಗರದಲ್ಲಿ ಚಾಲನೆ ನೀಡುವ ಮೂಲಕ ಪ್ರಚಾರವನ್ನೂ ಆರಂಭಿಸಲಾಯಿತು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ರವಿಶಂಕರ್ ಇತರರು ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ದೇವರಾಯಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪ್ರಗತಿ ರಥಕ್ಕೆ ಚಾಲನೆ ನೀಡಿದರು.

ನಂತರ ಜ್ಯೋತಿ ಗಣೇಶ್ ಮಾತನಾಡಿ, ‘ಪಕ್ಷದ ಮುಖಂಡರ ಸಮ್ಮುಖದಲ್ಲಿ ಸಿದ್ಧಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ನಗರದ ದೇವಮೂಲೆಯಾದ ದೇವರಾಯಪಟ್ಟಣದಿಂದ ವಿಜಯ ರಥಯಾತ್ರೆ ಆರಂಭಿಸಲಾಗಿದೆ. ಮೊದಲ ದಿನ 35ನೇ ವಾರ್ಡ್‌ನಲ್ಲಿ ಸಂಚರಿಸಲಿದೆ. ಮುಂದಿನ 25 ದಿನಗಳಲ್ಲಿ ನಗರದ 35 ವಾರ್ಡ್‍ಗಳ ಎಲ್ಲಾ ಬೂತ್‍ಗಳಿಗೂ ರಥಯಾತ್ರೆ ತಲುಪಲಿದೆ’ ಎಂದು ಹೇಳಿದರು.

ADVERTISEMENT

ಎಚ್.ಎಸ್. ರವಿಶಂಕರ್, ‘ರಾಜ್ಯದಾದ್ಯಂತ ವಿಜಯ ರಥಯಾತ್ರೆ ನಡೆಯುತ್ತಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಲಾಗುತ್ತಿದೆ. ದೊಡ್ಡ ಎಲ್‌ಇಡಿ ಸ್ಕ್ರೀನ್ ಇರುವ ವಾಹನದ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಕಾರ್ಯಕರ್ತರು ಪ್ರತಿ ಬಡಾವಣೆ, ಮನೆಗಳಿಗೆ ತೆರಳಿ ಪಕ್ಷದ ಕರಪತ್ರ ಹಂಚಲಿದ್ದಾರೆ. ಜತೆಗೆ ಪ್ರಣಾಳಿಕೆಗೆ ಅಗತ್ಯ ಸಲಹೆ, ಸೂಚನೆ ಪಡೆಯಲಿದ್ದಾರೆ’ ಎಂದು ತಿಳಿಸಿದರು.

ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ರಥಯಾತ್ರೆ ಆಯೋಜಿಸಿದ್ದು, ಚುನಾವಣೆ ಸಮಯದಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಜನೋಪಯೋಗಿ ಕೆಲಸಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದರು.

ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

**

ಶಿವಣ್ಣ ಪ್ರತ್ಯೇಕ ಪ್ರಚಾರ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್. ರವಿಶಂಕರ್, ಶಾಸಕ ಜ್ಯೋತಿ ಗಣೇಶ್ ‘ಪ್ರಗತಿ ರಥ’ಯಾತ್ರೆ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದರೆ, ಮತ್ತೊಂದೆಡೆ ಮಾಜಿ ಶಾಸಕ ಸೊಗಡು ಶಿವಣ್ಣ ಪ್ರತ್ಯೇಕವಾಗಿ ಪ್ರಚಾರ ಆರಂಭಿಸಿದರು.

ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಪ್ರಚಾರಕ್ಕೆ ಚಾಲನೆ ನೀಡಿದರು.

‘1994ರಿಂದ ನಗರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತೇನೆ. ಕ್ಷೇತ್ರದ ಜನರ ಮನೆ ಬಾಗಿಲಿಗೆ ತೆರಳಿ ಪ್ರಚಾರ ಮಾಡುತ್ತೇನೆ. ಕ್ಷೇತ್ರದ ಜನರಿಂದಲೇ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಬರುತ್ತಿದೆ. ಪ್ರತ್ಯೇಕವಾಗಿ ಪ್ರಚಾರ ಮಾಡಿ ಗೊಂದಲ ಮೂಡಿಸುತ್ತಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.

ಮುಖಂಡರಾದ ಧನಿಯಾಕುಮಾರ್, ಶಬ್ಬೀರ್ ಅಹಮದ್, ಸುಜಾತ ಚಂದ್ರಶೇಖರ್, ರಮೇಶ್ ಆಚಾರ್, ಲಕ್ಷ್ಮಿಶ್, ಕುಮಾರಸ್ವಾಮಿ, ಆಟೊ ನವೀನ್, ಜೈಪ್ರಕಾಶ್, ಚೌಡಪ್ಪ, ಬನಶಂಕರಿ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.