ADVERTISEMENT

ಸುಳ್ಳು ಭರವಸೆಯಿಂದ ಬಿಜೆಪಿ ಗೆಲುವು

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್. ರಾಜಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:55 IST
Last Updated 20 ನವೆಂಬರ್ 2020, 1:55 IST
ಇಂದಿರಾ ಗಾಂಧಿ ಭಾವಚಿತ್ರಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಪುಷ್ಪ ನಮನ ಸಲ್ಲಿಸಿದರು
ಇಂದಿರಾ ಗಾಂಧಿ ಭಾವಚಿತ್ರಕ್ಕೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಪುಷ್ಪ ನಮನ ಸಲ್ಲಿಸಿದರು   

ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಬಿಜೆಪಿಯು ಮತದಾರರಿಗೆ ಹೇಳಿದ ಅತಿಯಾದ ಸುಳ್ಳುಗಳೇ ಕಾರಣ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್. ರಾಜಣ್ಣ ಆರೋಪಿಸಿದರು.

ನಗರದ ಟಿ.ಎ.ಪಿ.ಸಿ.ಎಂ ಮುಂಭಾಗದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 103ನೇ ಜಯಂತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮದಲೂರು ಕೆರೆಗೆ ನೀರು ಹರಿಸುತ್ತೇವೆ. ನ್ಯಾ.ಸದಾಶಿವ ಆಯೋಗದ ವರದಿ ಜಾರಿಗೊಗೊಳಿಸುತ್ತೇವೆ. ಕಾಡುಗೊಲ್ಲರ ಅಭಿವೃದ್ಧಿ ನಿಗಮ, ಮದ್ದಕ್ಕನಹಳ್ಳಿಯಲ್ಲಿ ಭೋವಿ ಸಮುದಾಯಕ್ಕೆ ಕಲ್ಲು ಗಣಿಗಾರಿಕೆ ಗುತ್ತಿಗೆ ಸೇರಿದಂತೆ ಹಲವಾರು ಹಸಿ ಸುಳ್ಳುಗಳನ್ನು ಸತ್ಯದ ತಲೆಯ ಮೇಲೆ ಹೊಡದಂತೆ ಹೇಳಿದರು. ಇದನ್ನು ಮತದಾರರು ನಂಬಿ, ಬಿಜೆಪಿ ಕಡೆಗೆ ವಾಲಿದರು ಎಂದರು.

ADVERTISEMENT

‘ನಾನು ಇಂದಿರಾಗಾಂಧಿ ಅವರ ಅನುಯಾಯಿ. 1971ರಲ್ಲಿ ಅವರು ತೆಗೆದುಕೊಂಡ ಸಾಮಾಜಿಕ ಕ್ರಾಂತಿಯ ನಿರ್ಣಯಗಳಿಂದ ಪ್ರಜಾ ಸೊಷಿಯಲಿಷ್ಟ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದೆ’ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ಇಂದು ಹೊಸ ಮುಖಗಳ ಅಗತ್ಯವಿದೆ. ದೇಶದಲ್ಲಿ 30 ಕೋಟಿಗೂ ಹೆಚ್ಚು ಯುವ ಮತದಾರರಿದ್ದಾರೆ. ಅವರನ್ನು ಪಕ್ಷದತ್ತ ಸೆಳೆಯಬೇಕು ಎಂದರೆ ಹೊಸ ಮುಖಂಡರ ಅಗತ್ಯವಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗುವ ಆರ್ಹತೆ ಇರುವ ಅನೇಕ ಮುಖಂಡರು ಇದ್ದಾರೆ. ಮೊದಲು ಚುನಾವಣೆಯಲ್ಲಿ ಬಹುಮತ ಗಳಿಸುವತ್ತ ಎಲ್ಲರು ಗಮನಹರಿಸಬೇಕಿದೆ ಎಂದು ನುಡಿದರು.

ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ವೇಣುಗೋಪಾಲ್, ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಗಂಗಣ್ಣ, ಡಿಸಿಸಿ ಬ್ಯಾಂನಕ್ ಮಾಜಿ ನಿರ್ದೇಶಕ ನಾರಾಯಣಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.