ADVERTISEMENT

ಕಾಲ ಧರ್ಮಕ್ಕೆ ಸ್ಪಂದಿಸುವುದೇ ಕವಿತ್ವ: ಸಾಹಿತಿ ಡಾ.ಕವಿತಾಕೃಷ್ಣ

ಕಮಲಾ ಬಡ್ಡಿಹಳ್ಳಿ ರಚಿತ ‘ಬಿಳಿ ನವಿಲು’ ಕಥಾ ಸಂಕಲನ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2019, 12:40 IST
Last Updated 29 ಏಪ್ರಿಲ್ 2019, 12:40 IST
‘ಬಿಳಿ ನವಿಲು’ ಕಥಾ ಸಂಕಲನವನ್ನು ಗಣ್ಯರು ಬಿಡುಗಡೆ ಮಾಡಿದರು
‘ಬಿಳಿ ನವಿಲು’ ಕಥಾ ಸಂಕಲನವನ್ನು ಗಣ್ಯರು ಬಿಡುಗಡೆ ಮಾಡಿದರು   

ತುಮಕೂರು: ಕವಿಯಾದವನು ತನ್ನ ಕವಿತ್ವವನ್ನು ಕಾಲ ಧರ್ಮಕ್ಕೆ ಸ್ಪಂದಿಸುವಂತೆ ರಚಿಸಿದಾಗ ಮಾತ್ರ ಗೆಲುವು ತಮ್ಮದಾಗುತ್ತದೆ ಎಂದು ಹಿರಿಯ ಸಾಹಿತಿ ಡಾ.ಕವಿತಾಕೃಷ್ಣ ನುಡಿದರು.

ಕವಿತಾಕೃಷ್ಣ ಸಾಹಿತ್ಯ ಮಂದಿರ ಹಾಗೂ ಮಹಿಳಾ ಮಕ್ಕಳ ಸಾಹಿತ್ಯ ಕೂಟ ಸಹಯೋಗದಲ್ಲಿ ಆಯೋಜಿಸಿದ್ದ ಕಮಲಾ ಬಡ್ಡಿಹಳ್ಳಿ ರಚಿತ ‘ಬಿಳಿ ನವಿಲು’ ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಎಲ್ಲ ಸಾಹಿತ್ಯದ ಮೂಲ ಉದ್ದೇಶ ಮಾನವೀಯ ಸಂಸ್ಕಾರ. ಕವಿಯಾದವನು ಅನುಭವಗಳ ಪಾಠವನ್ನು ಎಂದೂ ಮರೆಯಬಾರದು. ಮಾನವ ಧರ್ಮಕ್ಕಿಂತ ಮನೋಧರ್ಮ ದೊಡ್ಡದು. ಆದ್ದರಿಂದ ಕವಿಗಳು ಅದನ್ನು ಪ್ರತಿಪಾದಿಸಬೇಕು. ಕಲೆ ಮತ್ತು ಸಾಹಿತ್ಯ ನಿಂತ ನೀರಲ್ಲ ಅದು ಪ್ರವಹಿಸುತ್ತಿರುತ್ತದೆ’ ಎಂದು ಹೇಳಿದರು.

ADVERTISEMENT

‘ಪ್ರಕೃತಿಯ ತನ್ನ ಚಲನಶೀಲ ಗುಣದಿಂದ ಪರಮೋಲ್ಲಾಸದಿಂದ ಇರುತ್ತದೆ. ಮಾನವನೂ ಕೂಡ ಅಂತಹ ಗುಣವನ್ನು ಬೆಳೆಸಿಕೊಂಡರೆ ಬಹು ಎತ್ತರಕ್ಕೆ ಬೆಳೆಯುತ್ತಾನೆ. ಆದ್ದರಿಂದ ಕವಿ ದೃಷ್ಟಿಯಲ್ಲಿ ಚಲನಶೀಲತೆ ಕಡ್ಡಾಯವಾಗಬೇಕು’ ಎಂದರು.

ಕೃತಿ ಬಿಡುಗಡೆ ಮಾಡಿದ ಪ್ರೊ.ಶಂಕರಗೌಡ ಬಿರಾದಾರ ಮಾತನಾಡಿ, ‘ತನ್ನ ಕ್ರಿಯೆಯಲ್ಲಿ ಎಲ್ಲೂ ರಂಗು ರಂಗಿನ ಬಣ್ಣಗಳಿಲ್ಲದೆ ಶುಭ್ರವಾಗಿ ಬದುಕುವ ಬದುಕನ್ನು ಕಟ್ಟಿಕೊಡುವಂತಹ ಕಥಾ ಸಂಕಲ ಈ ಬಿಳಿ ನವಿಲು’ ಎಂದರು.

‘ಕವಿ ನಿರ್ಮಲ ಹೃದಯದ ಹಸನ್ಮುಖಿ ಆಗಬೇಕು. ಯಾರ ಹೃದಯದಲ್ಲಿ ಸಮಾಜಕ್ಕಾಗಿ ಚಿಂತನ-ಮಂಥನ, ಮಿಡಿತ ಪ್ರಾರಂಭವಾಗುತ್ತದೆಯೋ ಅಂತಹವರು ಮಾತ್ರ ಸಾಹಿತ್ಯದ ದುಂಬಿಗಳಾಗುತ್ತಾರೆ. ಗದ್ಯ ಪದ್ಯಗಳನ್ನು ಸೃಷ್ಟಿಸುವರು. ಪ್ರಸ್ತುತ ಸಮಾಜದ ಓರೆ-ಕೋರೆಗಳನ್ನು, ಕೊಳೆಯನ್ನು ತೊಳೆಯುವ ಸಾಹಿತ್ಯವನ್ನು ಕವಿಗಳು ಬರೆಯಬೇಕು’ ಎಂದು ಹೇಳಿದರು.

ಲೇಖಕಿ ಕಮಲಾ ಬಡ್ಡಿಹಳ್ಳಿ ಮಾತನಾಡಿ, ‘ದಿನನಿತ್ಯದ ನಮ್ಮ ಬದುಕಿನ ನಡುವೆ ಅನೇಕ ವಿಷಯಗಳು ನಡೆಯುತ್ತವೆ. ಕಷ್ಟಗಳನ್ನು ಕೊಡುವವರು ಒಂದು ಕಡೆಯಾದರೆ, ಆ ಕಷ್ಟಗಳಿಗೆ ಪರಿಹಾರ ಸೂಚಿಸುವವರು, ಪರಿಹಾರ ನೀಡುವವರು, ಸಹಾಯ ಮಾಡುವವರು ಮತ್ತೊಂದು ಕಡೆ ಇದ್ದಾರೆ’ ಎಂದರು.

ಪ್ರಕೃತಿಯಲ್ಲಿ ಜೀವಿಸುತ್ತಿರುವ ಕೋಟ್ಯಂತರ ಜೀವರಾಶಿಗಳ ಹಾಗೆ ಮಾನವನು ಒಂದು ಜೀವಿ ಅಷ್ಟೇ. ಮಾನವ ತನ್ನ ನಿತ್ಯ ಜೀವನದಲ್ಲಿ ಉತ್ತಮ ಗುಣವನ್ನು ರೂಢಿಸಿಕೊಂಡು ಬದುಕುವುದನ್ನು ಅಳವಡಿಸಿಕೊಳ್ಳಬೇಕು ಎನ್ನುವ ಸಲುವಾಗಿ ರಚಿತವಾಗಿರುವುದೇ ಈ ಕೃತಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಂಗಾಧರ ಕೊಡ್ಲಿ, ಸುಮಾ ಬೆಳಗೆರೆ, ಎಸ್‌.ಪಿ.ಸವಿತಾ, ಜಿ.ಕೆ.ಕುಲಕರ್ಣಿ, ಹೇಮಾವತಿ ಸತ್ಯಮಂಗಲ, ದಯಾನಂದ ಕುಲಕರ್ಣಿ, ಪರಿಮಳಾ ಸತೀಶ್, ತಿಪ್ಪೇಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.