ADVERTISEMENT

ಬಿಎಸ್‌ವೈ ಬದಲಾವಣೆ ಷಡ್ಯಂತ್ರ ಕೈಬಿಡಿ: ಬಿಜೆಪಿ ವರಿಷ್ಠರಿಗೆ ಮಠಾಧೀಶರ ಎಚ್ಚರಿಕೆ

ತುಮಕೂರು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 22:22 IST
Last Updated 2 ಆಗಸ್ಟ್ 2020, 22:22 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ತಿಪಟೂರು: ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಾಯಿಸಲು ನಡೆಯುತ್ತಿರುವ ಷಡ್ಯಂತ್ರಗಳನ್ನು ಕೈ ಬಿಡಬೇಕು. ಯಡಿಯೂರಪ್ಪ ಅವರನ್ನು ಸ್ಥಾನದಿಂದ ಕೆಳಕ್ಕೆ ಇಳಿಸಿದರೆ ಕರ್ನಾಟಕದಲ್ಲಿ ಬಿಜೆಪಿ ಹೆಸರಿಲ್ಲದಂತೆ ಆಗುತ್ತದೆ. ಪಕ್ಷದ ವರಿಷ್ಠರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ವಿವಿಧ ಮಠಾಧೀಶರು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

‘ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪ ಅವರ ಪಾತ್ರ ಮಹತ್ವವಾದುದು. ಈಗ ನಾಯಕತ್ವ ಬದಲಾವಣೆಗೆ ಷಡ್ಯಂತ್ರ ನಡೆಯುತ್ತಿರುವುದು ಆಶ್ಚರ್ಯ ಹಾಗೂ ನೋವಿನ ಸಂಗತಿ’ ಎಂದು ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ತಿಳಿಸಿದರು.

ಯಡಿಯೂರಪ್ಪ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಕಾರ್ಯ ಶೋಭೆ ತರುವತಹ ದ್ದಲ್ಲ. ಯಡಿಯೂರಪ್ಪ ಇಲ್ಲದೇ ಬಿಜೆಪಿ ಸರ್ಕಾರ ರಚನೆ ಅಸಾಧ್ಯ ಎಂಬುದನ್ನು ಅರಿಯುವ ಅಗತ್ಯವಿದೆ. ಅವರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಗಳನ್ನು ನಿಲ್ಲಿಸಬೇಕು ಎಂದು
ಒತ್ತಾಯಿಸಿದರು.

ADVERTISEMENT

ಕುಪ್ಪೂರು-ತಮ್ಮಡಿಹಳ್ಳಿ ವಿರಕ್ತ ಮಠದ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ, ಕುರುಬ ಸಮಾಜವು ಸಿದ್ದರಾಮಯ್ಯ ಅವರನ್ನು, ಒಕ್ಕಲಿಗ ಸಮಾಜವು ಎಚ್‌.ಡಿ.ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರನ್ನು ಪಕ್ಷಾತೀತವಾಗಿ ನಾಯಕ ಎಂದು ಒಪ್ಪಿಕೊಂಡಿವೆ. ಆದರೆ, ವೀರಶೈವ, ಲಿಂಗಾಯತಸಮಾಜದ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂದು ದೂರಿದರು.

ದೊಡ್ಡಗುಣಿಯ ರೇವಣ ಸಿದ್ದೇಶ್ವರ ಸ್ವಾಮೀಜಿ, ಮಾದಿಹಳ್ಳಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಿದರೆಯ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವಿಯಕಾರದ ವೀರ ಬಸವ ಸ್ವಾಮೀಜಿ, ಡಿ.ಎಂ.ಕುರ್ಕೆಯ ಶಶಿಶೇಖರ ಸಿದ್ಧಬಸವ ಸ್ವಾಮೀಜಿ, ಅಂಬಲದೇವರಹಳ್ಳಿಯ ಉಜ್ಜನೀಶ್ವರ ಸ್ವಾಮೀಜಿ, ನಿಟ್ಟೂರು ಬಿ.ಕೋಡಿಹಳ್ಳಿಯ ಭೃಂಗೇಶ್ವರ ಸ್ವಾಮೀಜಿ, ತಂಗನಹಳ್ಳಿಯ ಬಸವ ಮಹಾಲಿಂಗ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.