ADVERTISEMENT

ರಾತ್ರಿ ಕೆರೆ ತುಂಬಿಸಿ, ಹಗಲು ನೀರು ಹರಿಸಿ

ಬುಗಡನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಬಳಿಕ ಸೊಗಡು ಶಿವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 13:55 IST
Last Updated 14 ಆಗಸ್ಟ್ 2019, 13:55 IST
ಸೊಗಡು ಶಿವಣ್ಣ(ಬಲತುದಿ) ಬುಗಡನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು
ಸೊಗಡು ಶಿವಣ್ಣ(ಬಲತುದಿ) ಬುಗಡನಹಳ್ಳಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ವೀಕ್ಷಿಸಿದರು   

ತುಮಕೂರು: ಹೇಮಾವತಿ ನಾಲೆಯಿಂದ ಬರುತ್ತಿರುವ ನೀರನ್ನು ರಾತ್ರಿ ಹೊತ್ತು ಕೆರೆಗಳಿಗೆ ತುಂಬಿಸಿ, ಹಗಲಿನಲ್ಲಿ ಶುದ್ಧೀಕರಿಸಿದ ನೀರನ್ನು ನಗರಕ್ಕೆ ಸರಬರಾಜು ಮಾಡಿ ಎಂದು ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಒತ್ತಾಯಿಸಿದರು.

ಹೆಬ್ಬಾಕ ಕೆರೆಯಂಗಳ ವೀಕ್ಷಣೆ ಮಾಡುತ್ತ, ಬುಗಡನಹಳ್ಳಿ ಕೆರೆಯ ಹೂಳೆತ್ತುವ ಕಾಮಗಾರಿಗಳನ್ನು ನೋಡುತ್ತಲೇ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಬುಧವಾರ ಮಾತನಾಡಿದರು.

ರಾತ್ರಿ 7 ಗಂಟೆಯಿಂದ ಬೆಳಗಿನ ಜಾವ 5ರ ವರೆಗೂ ನಾಲೆಯ ನೀರನ್ನು ಹೆಬ್ಬಾಕ, ಬಳಿಕ ಅಮಾನಿಕೆರೆಗಳಿಗೆ ಹರಿಸಬೇಕು. ಬೆಳಿಗ್ಗೆ 5ರಿಂದ ಸಂಜೆ 6ರ ವರೆಗೆ ನಗರಕ್ಕೆ ನೀರು ಪೂರೈಕೆ ಮಾಡಬೇಕು. ಇದರಿಂದ ಕೆರೆಗಳು ತುಂಬುತ್ತವೆ. ನೀರು ಪೂರೈಕೆಯಲ್ಲಿಯೂ ವ್ಯತ್ಯಯ ಆಗುವುದಿಲ್ಲ ಎಂದು ಅವರು ಹೇಳಿದರು.

ADVERTISEMENT

ಅವರ ಕೆರೆ ಭೇಟಿ ಕಾರ್ಯಕ್ರಮ ಹೆಬ್ಬಾಕದಿಂದ ಆರಂಭವಾಯಿತು.

ನಾಲೆಯ ನೀರನ್ನು ಹೆಬ್ಬಾಕ ಕೆರೆಯಲ್ಲಿ ತುಂಬಿಸಿದರೆ, ನಗರಕ್ಕೆ ಮೂರು ತಿಂಗಳು ನೀರು ಪೂರೈಕೆ ಮಾಡಬಹುದು. ಇಲ್ಲಿನ ನೀರು ಹರಿಸಲು ವ್ಯವಸ್ಥಿತವಾದ ಕೊಳವೆ ಮಾರ್ಗವಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯುಎಸ್ಎಸ್‌ಬಿ) ಅಧಿಕಾರಿಗಳು ಇತ್ತ ಗಮನ ಹರಿಸುತ್ತಲೇ ಇಲ್ಲ. ಈ ಕೆರೆಗೆ ನೀರು ತುಂಬಿಸಿದರೆ, ಅಂತರ್ಜಲ ಹೆಚ್ಚಿ ಕೃಷಿ ಚಟುವಟಿಕೆಗಳಿಗೂ ಅನುಕೂಲ ಆಗುತ್ತದೆ ಎಂದು ಕೆರೆಯನ್ನು ತೋರಿಸುತ್ತಲೇ ಹೇಳಿದರು.

ಬಳಿಕ ಅವರು ನಾಲೆಯ ನೀರು ಬುಗಡನಹಳ್ಳಿ ಕೆರೆಗೆ ಹರಿಯುವ ಸ್ಥಳಕ್ಕೂ ಭೇಟಿ ಇತ್ತರು. ಅಲ್ಲಿನ ಸ್ಥಳೀಯ ಸಿಬ್ಬಂದಿ, ಮೂರು ದಿನಗಳಿಂದ ನಾಲೆಯ ಎರಡು ಮೀಟರ್‌ ಆಳದಷ್ಟು ನೀರು ಕೆರೆಗೆ ಬರುತ್ತಿದೆ. ಈ ಪ್ರಮಾಣದ ನೀರು 12 ದಿನಗಳ ಕಾಲ ಬಂದರೆ, ಕೆರೆ ತುಂಬಲಿದೆ ಎಂದು ಮಾಹಿತಿ ನೀಡಿದರು.

ನಂತರ ಶಿವಣ್ಣ ಅವರು ಬುಗಡನಹಳ್ಳಿ ಕೆರೆಯಂಗಳದಲ್ಲಿ ನಡೆಯುತ್ತಿರುವ ಹೂಳು ತೆಗೆಯುವ ಕಾಮಗಾರಿಯನ್ನು ವೀಕ್ಷಿಸಿದರು. ಕೆರೆಯಂಗಳದ ತಗ್ಗಿನಲ್ಲಿ ಇಳಿಯುತ್ತ, ದಿಬ್ಬಗಳನ್ನು ಹತ್ತುತ್ತ ಕಾಮಗಾರಿಯ ಕುರಿತು ಅಸಮಾಧಾನವನ್ನು ಹೊರಹಾಕಿದರು.

ಮೈದಾಳ ಮತ್ತು ದೇವರಾಯಪಟ್ಟಣ ಕೆರೆಗಳಿಗೆ ನಾಲೆಯ ನೀರು ಹರಿಸುವ ಕೊಳವೆ ಮಾರ್ಗದ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ಇದರಿಂದ ಭವಿಷ್ಯದಲ್ಲಿ ನೀರಿನ ಸಮಸ್ಯೆ ತಲೆದೂರದು ಎಂದು ಹೇಳಿದರು.

*

ಕೆರೆ ಅಭಿವೃದ್ಧಿ : ಅವೈಜ್ಞಾನಿಕ ಕಾಮಗಾರಿ ಆರೋಪ

ಬುಗಡನಹಳ್ಳಿ ಕೆರೆ ನವೀಕರಣ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ ಎಂದು ಸೊಗಡು ಶಿವಣ್ಣ ಆರೋಪಿಸಿದರು.

ಹೂಳು ತೆಗೆಯಲು ಕಾಮಗಾರಿಗಾಗಿ ಅರ್ಧ ಭಾಗದ ಕೆರೆಯಂಗಳದಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಇದರಿಂದ ನೀರು ಸಂಗ್ರಹ ಸಾಮರ್ಥ್ಯವೇ ಕಡಿಮೆಯಾಗಿದೆ. ಆ ಒಡ್ಡುಗಳಿಂದ ಕೆರೆಯ ಎಡದ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಅವಘಡ ಸಂಭವಿಸಲುಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೆರೆಯ ಉತ್ತರ ಭಾಗದಲ್ಲಿ(ನಾಲೆ ಬದಿ) ಇನ್ನೂ ಮೂರು ಅಡಿ ಹೂಳು ತೆಗೆಯಬಹುದಿತ್ತು. ನಾಲೆಯ ಕೆಳಭಾಗದಿಂದ ಕೆರೆಯ ಎರಡು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಟನಲ್‌ಗಳನ್ನು ವಿಸ್ತರಣೆ ಮಾಡಬಹುದಿತ್ತು. ಅದನ್ನು ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

*

ಕೆರೆಯ ಹೂಳನ್ನು, ಮರಳನ್ನು ಸಹ ಗುತ್ತಿಗೆದಾರರು ಮಾರಿಕೊಳ್ಳುತ್ತಿದ್ದಾರೆ. ಸರಿಯಾಗಿ ಹೂಳನ್ನು ಎತ್ತದೆ, ಎಂಟು ಅಡಿ ಆಳ ಹೂಳು ತೆಗೆದಿರುವ ವರದಿ ಸಿದ್ಧಪಡಿಸುತ್ತಿದ್ದಾರೆ.

-ಸೊಗಡು ಶಿವಣ್ಣ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.