ADVERTISEMENT

ಅರ್ಥ ಮಾಡಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಬೆಳೆಸಿ

ಮಾಧ್ಯಮಿಕ ಶಿಕ್ಷಕರ ಸಂಘದಿಂದ ಶಿಕ್ಷಕ ದಿನಾಚರಣೆ; ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
‌ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೆ.ಸಿ.ಮಾಧುಸ್ವಾಮಿ, ಜಿ.ಬಿ.ಜ್ಯೋತಿ ಗಣೇಶ್, ವೈ.ಎಚ್.ಹುಚ್ಚಯ್ಯ, ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು
‌ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜೆ.ಸಿ.ಮಾಧುಸ್ವಾಮಿ, ಜಿ.ಬಿ.ಜ್ಯೋತಿ ಗಣೇಶ್, ವೈ.ಎಚ್.ಹುಚ್ಚಯ್ಯ, ಶಿಕ್ಷಕ ಸಂಘದ ಪದಾಧಿಕಾರಿಗಳು ಇದ್ದರು   

ತುಮಕೂರು: ‘ವಿಷಯ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಶಿಕ್ಷಕರು ಮಕ್ಕಳಲ್ಲಿ ಬೆಳೆಸಿದರೆ ಮಾತ್ರ ಉತ್ತಮ ವಿದ್ಯಾರ್ಥಿಗಳು ರೂಪಗೊಳ್ಳುತ್ತಾರೆಯೇ ಹೊರತು ಹೆಚ್ಚು ಅಂಕ ಪಡೆಯುವುದರಿಂದ ಅಲ್ಲ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಜಿಲ್ಲಾ ಘಟಕವು ಭಾನುವಾರ ಸಿದ್ಧಗಂಗಾಮಠದ ಆವರಣದಲ್ಲಿ ಆಯೋಜಿಸಿದ್ಧ ಶಿಕ್ಷಕರ ದಿನಾಚರಣೆ, ಪ್ರತಿಭಾ ಪುರಸ್ಕಾರ ಹಾಗೂ ಶಿಕ್ಷಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

’ಶೇ 80, 85, 90ರಷ್ಟು ಅಂಕಗಳನ್ನು ಪಡೆಯುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಅಂಕ ಪಡೆಯುವುದಷ್ಟೇ ಪ್ರತಿಭೆ ಅಲ್ಲ. ಅದು ಶ್ರಮ ಎನ್ನುವುದನ್ನು ಶಿಕ್ಷಕರು ಮತ್ತು ಮಕ್ಕಳು ಅರಿತುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

’ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಂಪ್ರದಾಯಿಕ ಶಿಕ್ಷಣ ಉನ್ನತ ವ್ಯಾಸಂಗಕ್ಕೆ ನೆರವಿಗೆ ಬರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದರೆ ಮಾತ್ರ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುತ್ತದೆ. ಸಾಂಪ್ರದಾಯಿಕ ಶಿಕ್ಷಣದಲ್ಲಿ ಉತ್ತಮ ಅಂಕಗಳಿಸಿದವರು, ಸಿಇಟಿ, ಕಾಮೆಡ್–ಕೆ, ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಆಗುತ್ತಿಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಬಿ.ಜ್ಯೋತಿಗಣೇಶ್, ’ಅನುಭವದ ಮೂಲಕ ಶಿಕ್ಷಕರಿಗೆ ಮಾರ್ಗದರ್ಶನವನ್ನು ಸಚಿವರಾದ ಮಾಧುಸ್ವಾಮಿ ಅವರು ಮಾಡಿದ್ದಾರೆ. ಮಾಧುಸ್ವಾಮಿ ಮತ್ತು ಸುರೇಶ್ ಕುಮಾರ್ ಅವರಿಂದ ಶಿಕ್ಷಕರ ಸಮಸ್ಯೆಗೆ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದಲ್ಲಿ ನ್ಯಾಯ ಸಿಗುತ್ತದೆ’ ಎಂದು ಭರವಸೆ ನೀಡಿದರು.

ಬಿಜೆಪಿ ಮುಖಂಡ ಪಿ.ಆರ್ ಬಸವರಾಜು, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್.ಹುಚ್ಚಯ್ಯ ಮಾತನಾಡಿದರು.

ಶಿಕ್ಷಕರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಿತು.

ಬಾಪೂಜಿ ಶಿಕ್ಷಣ ಸಂಸ್ಥೆಯ ಎಂ.ಬಸವಯ್ಯ, ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ವೃಷಭೇಂದ್ರಸ್ವಾಮಿ, ಸಹ ಶಿಕ್ಷಕರ ಸಂಘ ಅಧ್ಯಕ್ಷ ಉಮೇಶ್, ಮಾಧ್ಯಮಿಕ ಶಿಕ್ಷಕರ ಸಂಘದ ಮುಖಂಡರಾದ ಕೆ.ಎಸ್.ಉಮಾ ಮಹೇಶ್, ಜೆ.ಎಸ್.ರೇಣುಕಾನಂದ್, ಟಿ.ಎಂ.ರಾಘವೇಂದ್ರ, ಎಚ್.ಶಿವರಾಮು ಕೆ‌.ಎಸ್.ಸಿದ್ದಲಿಂಗಪ್ಪ, ದೇವರಾಜಯ್ಯ, ಕೃಷ್ಣಮೂರ್ತಿ, ಮಂಜುನಾಥ್, ಮಾದಾಪುರ ಶಿವಪ್ಪ, ಟಿ.ತ್ರೀವೇಣಿ, ಎಚ್.ಶಿವರಾಮು, ಅಮರಾವತಿ ದ್ರೇಹಾಚಾರ್, ಕೆ.ಪ್ರಕಾಶ್,ಗಂಗಾಧರಾಚಾರ್ಯ, ನಿಟ್ರಳ್ಳಿ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.