ADVERTISEMENT

2 ವರ್ಷವಾದರೂ ಮುಕ್ತವಾಗಿಲ್ಲ ಬೈಪಾಸ್‌ ರಸ್ತೆ

ಮಧುಗಿರಿ ಬೈಪಾಸ್ ರಸ್ತೆ ಸ್ಥಿತಿ; ರಸ್ತೆಗೆ ಅಡ್ಡಲಾಗಿ ಬಂಡೆ, ಮಣ್ಣು ಹಾಕಿರುವ ರೈತರು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 6:58 IST
Last Updated 16 ಆಗಸ್ಟ್ 2020, 6:58 IST
ಮಧುಗಿರಿ ಬೈಪಾಸ್ ರಸ್ತೆಗೆ ಅಡ್ಡಲಾಗಿ ಕಲ್ಲು, ಮಣ್ಣು ಹಾಕಿರುವುದು
ಮಧುಗಿರಿ ಬೈಪಾಸ್ ರಸ್ತೆಗೆ ಅಡ್ಡಲಾಗಿ ಕಲ್ಲು, ಮಣ್ಣು ಹಾಕಿರುವುದು   

ಮಧುಗಿರಿ: ಇಲ್ಲಿನ ಬೈಪಾಸ್ ರಸ್ತೆ ಪೂರ್ಣಗೊಂಡು ಎರಡು ವರ್ಷ ಕಳೆದರೂ ರಸ್ತೆಗೆ ಅಡ್ಡಲಾಗಿ ಕಲ್ಲು ಬಂಡೆಗಳನ್ನು ಹಾಕಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿಲ್ಲ.

ಭೂಸ್ವಾಧೀನಕ್ಕೆ ಸಮರ್ಪಕ ಪರಿಹಾರ ನೀಡಿಲ್ಲ ಎಂದು ಕೆಲವು ರೈತರು ಬೈಪಾಸ್ ರಸ್ತೆಗೆ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ಹಾಕಿದ್ದಾರೆ. ಇದರಿಂದ ವಾಹನ ಸವಾರರಿಗೆ ಸಾಕಷ್ಟು ತೊಂದರೆ ಆಗುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.

ಮಧುಗಿರಿಹೊರವಲಯದ ಕೆಎಸ್ಆರ್‌ಟಿಸಿ ಬಸ್ ಡಿಪೊದಿಂದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದವರೆಗೂ ಕೆ–ಶಿಪ್‌ನಿಂದ ₹34 ಕೋಟಿ ವೆಚ್ಚದಲ್ಲಿ 7.2 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, ರೈತರು ಮೂರು ಕಡೆಗಳಲ್ಲಿ ದೊಡ್ಡ ಕಲ್ಲು ಹಾಗೂ ಮಣ್ಣು ಹಾಕಿರುವುದರಿಂದ ಪಾವಗಡ, ಹಿಂದೂಪುರ ಹಾಗೂ ಗೌರಿಬಿದನೂರು ಮಾರ್ಗಗಳಿಂದ ಬರುವ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ADVERTISEMENT

ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಂಡಿರುವ ಜಮೀನಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಹೋರಾಟ ನಡೆಸಿದ್ದರು. ಆದರೆ, ಕೆ–ಶಿಪ್‌ನವರು ಸಮರ್ಪಕ ಪರಿಹಾರ ನೀಡಿಲ್ಲ. ಆದ್ದರಿಂದ ಜಮೀನು ಕಳೆದುಕೊಂಡ ರೈತರು ರಸ್ತೆಗೆ ಕಲ್ಲು ಬಂಡೆ ಹಾಗೂ ಮಣ್ಣು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದು ನಡೆದು ಎರಡು ವರ್ಷ ಕಳೆದರೂ ಸಮಸ್ಯೆ ನಿವಾರಣೆಗೆ ಶಾಸಕರು, ಅಧಿಕಾರಿಗಳು ಮುಂದಾಗಿಲ್ಲ.

‘ಮಳವಳ್ಳಿ– ಪಾವಗಡ ರಾಜ್ಯ ಹೆದ್ದಾರಿಯ ಕೊರಟಗೆರೆ ತಾಲ್ಲೂಕಿನಲ್ಲಿ ಎರಡು ಟೋಲ್‌ಗಳನ್ನು ನಿರ್ಮಾಣಮಾಡಿ, ಹಣ ಸಂಗ್ರಹಿಸುತ್ತಿದ್ದಾರೆ. ಪಾವಗಡ ಹಾಗೂ ಹಿಂದೂಪುರದ ಊರುಗಳಿಂದ ಬರುವ ವಾಹನಗಳಿಗೆ ಮಧುಗಿರಿ ಬೈಪಾಸ್ ರಸ್ತೆಯ ಸಮಸ್ಯೆ ನಿವಾರಣೆ ಮಾಡಿದ ನಂತರ ಟೋಲ್ ಹಣ ಪಡೆಯಬೇಕು’ ಎಂದು ಚಾಲಕ ಪರಮೇಶ್ವರಪ್ಪ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.