ADVERTISEMENT

ಗುಬ್ಬಿ: ಜಾನುವಾರು ನಿಗೂಢ ಸಾವು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 2:34 IST
Last Updated 3 ನವೆಂಬರ್ 2020, 2:34 IST
ಗುಬ್ಬಿ ತಾಲ್ಲೂಕಿನ ರಂಗನಾಥಪುರದಲ್ಲಿ ರಾಸುಗಳಿಗೆ ಲಸಿಕೆ ಹಾಕಲಾಯಿತು
ಗುಬ್ಬಿ ತಾಲ್ಲೂಕಿನ ರಂಗನಾಥಪುರದಲ್ಲಿ ರಾಸುಗಳಿಗೆ ಲಸಿಕೆ ಹಾಕಲಾಯಿತು   

ಗುಬ್ಬಿ: ತಾಲ್ಲೂಕಿನ ರಂಗನಾಥಪುರದಲ್ಲಿ ಜಾನುವಾರುಗಳು ನಿಗೂಢವಾಗಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ದಿವಾಕರ್ ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ.

ಬಳಿಕ ಮಾತನಾಡಿದ ಅವರು, ‘ಜಾನುವಾರುಗಳಲ್ಲಿ ಯಾವುದೇ ರೋಗದ ಲಕ್ಷಣಗಳು ಕಾಣಿಸುತ್ತಿಲ್ಲ. ಮೇವಿನ ವ್ಯತ್ಯಾಸದಿಂದ ಅಥವಾ ಅಜೀರ್ಣದಿಂದ ಮೃತಪಟ್ಟಿರುವ ಸಾಧ್ಯತೆಗಳಿವೆ. ಸತ್ತಿರುವ ಜಾನುವಾರುಗಳ ಶವಪರೀಕ್ಷೆ ಮಾಡಲಾಗಿದೆ. ಜಾನುವಾರುಗಳ ಅಂಗಾಂಗಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬಂದ ತಕ್ಷಣ ಸತ್ಯಾಂಶ ಗೊತ್ತಾಗಲಿದೆ ಎಂದು ಹೇಳಿದರು.

ಈ ವರ್ಷ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ. ಹಾಗಾಗಿ ಕುರಿ ಮತ್ತು ಮೇಕೆಗಳು ಸತ್ತರೆ ಕೊಡಲಾಗುತ್ತಿದ್ದ ಪರಿಹಾರವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ. ಹಸು ಮತ್ತು ಎಮ್ಮೆಗಳು ಸತ್ತರೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ₹ 10 ಸಾವಿರ ಅನುದಾನ ನೀಡಲಾಗುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಈ ಅನುದಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಂದ ತಕ್ಷಣ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ADVERTISEMENT

ಜಾನುವಾರುಗಳಿಗೆ ಯಾವುದೇ ರೋಗದ ಲಕ್ಷಣಗಳು ಕಂಡುಬಂದರೆ ತಕ್ಷಣ ಇಲಾಖೆಯ ಗಮನಕ್ಕೆ ತರುವಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಲಸಿಕೆ ಹಾಕಿದ ನಂತರ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.