ತುಮಕೂರು: ಊರ್ಡಿಗೆರೆ ಹೋಬಳಿ ಕುರುವೆಲ್ಲು ಗ್ರಾಮದ ಎಲ್ಲ ರಸ್ತೆಗಳನ್ನು ಸಿಸಿ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಲು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ₹ 50 ಲಕ್ಷ ಅನುದಾನ ಬಿಡುಗಡೆ ಮಾಡುವಂತೆ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ಸಿ.ಗೌರಿಶಂಕರ್ ತಿಳಿಸಿದರು.
ಕುರುವೆಲ್ಲು ಗ್ರಾಮದಿಂದ ನಾಗಯ್ಯನಪಾಳ್ಯ ಮಾರ್ಗವಾಗಿ ರಾಮವೆಂಕಟಯ್ಯನಪಾಳ್ಯದವರೆಗೆ ₹ 92 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
‘ಮುಂದಿನ 25 ವರ್ಷ ಗ್ರಾಮಾಂತರ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಲಿದೆ. ಇಲ್ಲಿ ಬಿಜೆಪಿ ಉಳಿಯುವುದೇ ಸಂದೇಹ. ಜನರಿಗೆ ಅಭಿವೃದ್ಧಿ ವಿಚಾರವಾಗಿ ಗೊಂದಲಬೇಡ. ನಿಮ್ಮ ಮನೆ ಮಗನಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ’ ಎಂದರು.
‘ಬಹುತೇಕ ಬಡವರು ನಿವೇಶನ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಆಯಾ ಹೋಬಳಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿ, ಕಂದಾಯ ತನಿಖಾಧಿಕಾರಿಗೆ ತಮ್ಮ ವ್ಯಾಪ್ತಿಯ ಸರ್ಕಾರಿ ಜಮೀನನ್ನು ಗುರುತಿಸಿ ಅದನ್ನು ತಹಶೀಲ್ದಾರ್ ಗಮನಕ್ಕೆ ತಂದರೆ ನಿವೇಶನಗಳನ್ನಾಗಿ ಪರಿವರ್ತಿಸಿ ಬಡವರಿಗೆ ಹಂಚುವೆ’ ಎಂದು ತಿಳಿಸಿದರು.
‘ನಿವೇಶನ ಹಂಚುವ ವೇಳೆ ಪ್ರತಿ ಗ್ರಾಮಕ್ಕೆ ಅಧಿಕಾರಿಗಳೊಂದಿಗೆ ನಾನೇ ಖುದ್ದು ಭೇಟಿ ನೀಡುವೆ. ಅಧಿಕಾರಿಗಳ ಸಮ್ಮುಖದಲ್ಲಿ ದಾಖಲೆ ಪರಿಶೀಲಿಸಿ ಅರ್ಹರಿಗೆ ನಿವೇಶನ ಹಂಚುವೆ’ ಎಂದರು.
‘ಜನರ ಸಮಸ್ಯೆಗಳನ್ನು ಆಲಿಸಲು ತಾಲ್ಲೂಕು ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜನರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಕಿಡಿಗೇಡಿಗಳ ಮಾತಿಗೆ ಹಾಗೂ ಹೇಳಿಕೆಗಳಿಗೆ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ತಕ್ಕ ಉತ್ತರ ನೀಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.