ADVERTISEMENT

ಹಬ್ಬಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಿ

ಪರಿಸರ ಮಿತ್ರ ಗಣೇಶ ಚತುರ್ಥಿ ಎಂಬ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಸ್.ಪಾಟೀಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 9:44 IST
Last Updated 23 ಆಗಸ್ಟ್ 2019, 9:44 IST
ತುಮಕೂರು ಟೌನ್ ಹಾಲ್‌ನಲ್ಲಿ ಗುರುವಾರ ಜಾಥಾಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಸ್.ಪಾಟೀಲ್ ಚಾಲನೆ ನೀಡಿದರು
ತುಮಕೂರು ಟೌನ್ ಹಾಲ್‌ನಲ್ಲಿ ಗುರುವಾರ ಜಾಥಾಕ್ಕೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಸ್.ಪಾಟೀಲ್ ಚಾಲನೆ ನೀಡಿದರು   

ತುಮಕೂರು: ‘ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಪರಿಸರ ಸ್ನೇಹಿಯಾಗಿ ಆಚರಿಸಿದಲ್ಲಿ ಪರಿಸರ ವಿನಾಶವನ್ನು ತಡೆಗಟ್ಟಬಹುದು’ ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಟಿ.ಎಸ್.ಪಾಟೀಲ್ ಹೇಳಿದರು.

ಟೌನ್ ಹಾಲ್‌ನಲ್ಲಿ ಗುರುವಾರ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಿಜ್ಞಾನ ಕೇಂದ್ರ, ಸರ್ವೋದಯ ಪದವಿ ಪೂರ್ವ ಕಾಲೇಜು, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ಆಯೋಜಿಸಿದ್ಧ ಪರಿಸರ ಮಿತ್ರ ಗಣೇಶ ಚತುರ್ಥಿ ಎಂಬ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಬದುಕಿನ ಶೈಲಿ, ಆಚರಣೆಗಳು ಪರಿಸರ ವಿನಾಶಕ್ಕೆ ಕಾರಣವಾಗಿವೆ. ಹಬ್ಬದ ಹೆಸರಿನಲ್ಲಿ ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ಕೆರೆ ಕಟ್ಟೆಗಳಿಗೆ ಬಿಡುವುದನ್ನು ನಿಲ್ಲಿಸಬೇಕು. ಪಶು, ಪಕ್ಷಿ, ಜಲಚರಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ADVERTISEMENT

ಮೂರ್ತಿಯ ಅಲಂಕಾರಕ್ಕೆ ಪ್ಲಾಸ್ಟಿಕ್ ಬಳಸದೇ ನೈಸರ್ಗಿಕವಾಗಿ ದೊರೆಯುವ ಹೂಗಳಿಂದ ಅಲಂಕರಿಸಿ ಜಲಮಾಲಿನ್ಯ, ಭೂಮಾಲಿನ್ಯವಾಗದಂತೆ ಎಚ್ಚರಿಕೆವಹಿಸಿ ಗಣೇಶ ಚತುರ್ಥಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ದಶರಥ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಭೀಮ್‌ಸಿಂಗ್ ಗೌಗಿ, ಉಪ ಪರಿಸರ ಅಧಿಕಾರಿ ರಮೇಶ್, ಸಹಾಯಕ ಪರಿಸರ ಅಧಿಕಾರಿ ಅಶೋಕ್, ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಆಂಜಿನಪ್ಪ, ಸಂಘಟನಕಾರ ಸುದೇಶ್‌ಕುಮಾರ್, ಕೆಂಪರಂಗಯ್ಯ, ಹುಚ್ಚಯ್ಯ, ಗಂಗಯ್ಯ ಇದ್ದರು.

ಜಾಥಾದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಗರದ ಬಿಜಿಎಸ್ ವೃತ್ತದಿಂದ ವೃತ್ತದಲ್ಲಿ ಆರಂಭವಾದ ಜಾಥಾ ಎಂ.ಜಿ ರಸ್ತೆ ಮೂಲಕ ಸಾಗಿ ಗಾಜಿನ ಮನೆಯಲ್ಲಿ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.