ADVERTISEMENT

ಸುಶಿಕ್ಷತರ ಆಯ್ಕೆಗೊಂದು ‘ಸವಾಲು’

ಪರಿಷತ್ ಮತದಾನ ಇಂದು; 15 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 4:32 IST
Last Updated 28 ಅಕ್ಟೋಬರ್ 2020, 4:32 IST
ಮತಗಟ್ಟೆಗೆ ತೆರಳಿದ ಸಿಬ್ಬಂದಿ
ಮತಗಟ್ಟೆಗೆ ತೆರಳಿದ ಸಿಬ್ಬಂದಿ   

ತುಮಕೂರು: ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಮತದಾನ ಬುಧವಾರ ನಡೆಯಲಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ 15 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ (ಹರಿಹರ, ದಾವಣಗೆರೆ, ಜಗಳೂರು ತಾಲ್ಲೂಕು ಸೇರಿ) ಜಿಲ್ಲೆಯನ್ನು ಒಳಗೊಂಡ ಆಗ್ನೇಯ ಪದವೀಧರ ಕ್ಷೇತ್ರ ಪ್ರಮುಖ ಮೂರು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಕಾಂಗ್ರೆಸ್‌ನ ರಮೇಶ್ ಬಾಬು, ಬಿಜೆಪಿಯ ಚಿದಾನಂದಗೌಡ, ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಅದೃಷ್ಟ ಪರೀಕ್ಷೆ ನಡೆಯಲಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಡಿ.ಟಿ.ಶ್ರೀನಿವಾಸ್, ಹಾಲನೂರು ಲೇಪಾಕ್ಷ ಸ್ಪರ್ಧಾ ಕಣದಲ್ಲಿ ಇದ್ದಾರೆ.

ಹಿಂದೊಮ್ಮೆ ಕ್ಷೇತ್ರವನ್ನು ಪ್ರತಿನಿಧಿಸಿದ್ದ ರಮೇಶ್ ಬಾಬು, ಮತ್ತೊಂದು ಅವಕಾಶಕ್ಕಾಗಿ ಬೆವರು ಹರಿಸಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ತಮ್ಮ ದಶಕಗಳ ರಾಜಕೀಯ ಅನುಭವಗಳನ್ನು ಪಣಕ್ಕೊಡ್ಡಿದ್ದಾರೆ. ಈ ಚುನಾವಣೆ ಅವರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದು, ಗೆಲುವು ಅನಿವಾರ್ಯ ಎಂಬಂತೆ ಹೋರಾಟ ನಡೆಸಿದ್ದಾರೆ.

ADVERTISEMENT

ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿರುವ ಚಿದಾನಂದಗೌಡ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದು, ಇದು ಪರಿಷತ್ ಚುನಾವಣೆಯ ಮೊದಲ ಅನುಭವ. ಕ್ಷೇತ್ರದಲ್ಲಿ 2002ರಲ್ಲಿ ಜೆಡಿಎಸ್, 2008ರಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದರೆ, 2014ರಲ್ಲಿ ಜೆಡಿಎಸ್ ಪಾರಮ್ಯ ಮೆರೆದಿತ್ತು. ಈ ಬಾರಿ ಶತಾಯಗತಾಯ ಸ್ಥಾನ ದಕ್ಕಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಬಿಜೆಪಿ ಹಾಗೂ ಸಂಘಪರಿವಾರ ಅವರ ಬೆನ್ನಿಗೆ ನಿಂತಿದ್ದು, ಗೆಲುವಿಗಾಗಿ ತಮ್ಮೆಲ್ಲ ‘ಶಕ್ತಿ’ ಬಳಸುತ್ತಿದ್ದಾರೆ.

ವಿಧಾನ ಪರಿಷತ್ ಸದಸ್ಯರಾಗಿದ್ದ ಚೌಡರೆಡ್ಡಿ ತೂಪಲ್ಲಿ ಅಧಿಕಾರ ಉಳಿಸಿಕೊಳ್ಳಲು ಮತ್ತೊಮ್ಮೆ ಪ್ರಯತ್ನ ಮುಂದುವರಿಸಿದ್ದಾರೆ. ಪದವೀಧರರು, ಶಿಕ್ಷಕರ ಪರವಾಗಿ ಕೆಲಸ ಮಾಡಿದ್ದು, ಇನ್ನೊಂದು ಅವಕಾಶಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್, ಜೆಡಿಎಸ್‌ಗೆ ಬಂಡಾಯದ ಬಿಸಿ ತಟ್ಟಿಲ್ಲ. ಆದರೆ ಬಿಜೆಪಿ ಬಂಡಾಯ ಕೆಂಡದುಂಡೆಯಾಗಿದೆ. ಬಂಡಾಯವಾಗಿ ಸ್ಪರ್ಧಿಸಿರುವ ಲಿಂಗಾಯತ ಸಮುದಾಯದ ಹಾಲನೂರು ಲೇಪಾಕ್ಷ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಬಿಜೆಪಿ ಮುಖಂಡರು ಮಾಡಿದ ಪ್ರಯತ್ನಕ್ಕೆ ಫಲ ಸಿಕ್ಕಿಲ್ಲ. ರಾಜ್ಯ ಗೊಲ್ಲರ (ಯಾದವ) ಸಂಘದ ಅಧ್ಯಕ್ಷ ಹಾಗೂ ಬಿಜೆಪಿಯಿಂದ ಆಯ್ಕೆಯಾಗಿರುವ ಹಿರಿಯೂರು ಶಾಸಕಿ ಪೂರ್ಣಿಮಾ ಪತಿ ಡಿ.ಟಿ.ಶ್ರೀನಿವಾಸ್ ಅವರನ್ನೂ ಸ್ಪರ್ಧೆಯಿಂದ ಹಿಂದೆ ಸರಿಸಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ.

ಇಂತಹ ಹಲವು ಸವಾಲುಗಳ ನಡುವೆ ಮತದಾನಕ್ಕೆ ವೇದಿಕೆ ಸಜ್ಜಾಗಿದೆ. ನ. 2ರಂದು ಬೆಂಗಳೂರಿನಲ್ಲಿ ಮತಗಳ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.