ತುಮಕೂರು: ಮನೆಯಲ್ಲಿ ಇದ್ದುಕೊಂಡೇ ₹5 ಸಾವಿರದಿಂದ ₹8 ಸಾವಿರ ಸಂಪಾದನೆ ಮಾಡಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಮಹಾಲಕ್ಷ್ಮಿ ನಗರದ ಎನ್.ಆರ್.ಸುಪ್ರಿಯಾ ಎಂಬುವರು ₹8 ಲಕ್ಷ ಕಳೆದುಕೊಂಡಿದ್ದಾರೆ.
ಆರೋಪಿಗಳು ವಾಟ್ಸ್ ಆ್ಯಪ್ ಮುಖಾಂತರ ಮೆಸೇಜ್ ಮಾಡಿ ಪಾರ್ಟ್‌ಟೈಮ್ ಕೆಲಸದ ಬಗ್ಗೆ ತಿಳಿಸಿದ್ದಾರೆ. ಸುಪ್ರಿಯಾ ಕೆಲಸದ ಬಗ್ಗೆ ಆಸಕ್ತಿ ತೋರಿದಾಗ ಅವರ ನಂಬರ್ ಅನ್ನು ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸಿದ್ದಾರೆ. ನಂತರ ಪ್ರೊಫೈಲ್ ಅಪ್‌ಡೇಟ್ ಮಾಡಿದ್ದು, ಕೂಡಲೇ ಅವರ ಖಾತೆಗೆ ₹180 ಜಮಾ ಮಾಡಿದ್ದಾರೆ. ಇದಾದ ಬಳಿಕ ಹೋಟೆಲ್ ರಿವ್ಯೂ ಟಾಸ್ಕ್ ನೀಡಿದ್ದಾರೆ.
‘ನಾವು ಹೇಳಿದಂತೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು’ ಎಂದು ಆರೋಪಿಗಳು ಹೇಳಿದ್ದಾರೆ. ಇದನ್ನು ನಂಬಿದ ಸುಪ್ರಿಯಾ ಆ. 6ರಿಂದ 12ರ ವರೆಗೆ ಹಂತ ಹಂತವಾಗಿ ಒಟ್ಟು ₹8,08,750 ಹಣ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹೂಡಿಕೆಯ ಹಣ ವಾಪಸ್ ಕೇಳಿದಾಗ ‘ಇನ್ನೂ ₹4 ಲಕ್ಷ ವರ್ಗಾಯಿಸಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು’ ಎಂದಿದ್ದಾರೆ.
‘ಮನೆಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಾ, ಹಣ ಗಳಿಸಬಹುದು ಎಂದು ನಂಬಿಸಿ, ಮೋಸ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ’ ಕೋರಿ ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.