ADVERTISEMENT

ತಳ್ಳುಗಾಡಿಯಲ್ಲಿ ತರಕಾರಿ ಮಾರಬಹುದು

ಮನೆಯಿಂದ ಹೊರಬಂದರೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 16:06 IST
Last Updated 4 ಏಪ್ರಿಲ್ 2020, 16:06 IST
 ಎಂ.ಎಸ್.ವೀಣಾ
 ಎಂ.ಎಸ್.ವೀಣಾ   

ಚಿಕ್ಕನಾಯಕನಹಳ್ಳಿ : ತಾಲೂಕಿನಲ್ಲಿ 9 ಕಡೆ ಚೆಕ್‌ಪೋಸ್ಟ್ ನಿರ್ಮಿಸಿದ್ದು ಹೊರ ಜಿಲ್ಲೆ, ಹೊರ ತಾಲ್ಲೂಕುಗಳಿಂದ ಬರುವ ಜನರ ಬಗ್ಗೆ ಪೋಲಿಸ್ ಇಲಾಖೆಯು ತೀವ್ರ ನಿಗಾ ವಹಿಸಿದೆ ಎಂದು ಸಿ.ಪಿ.ಐ. ವೀಣಾ ಎಂ.ಎಸ್. ತಿಳಿಸಿದ್ದಾರೆ.

ಪಟ್ಟಣದ ಠಾಣೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿಗೆ ವಿದೇಶದಿಂದ ಬಂದಂತಹ 14 ಮಂದಿಯನ್ನು ಮನೆಯಿಂದ ಹೊರಬರದಂತೆ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದರು.

ADVERTISEMENT

ತಾಲ್ಲೂಕಿನಲ್ಲಿ ಹುಳಿಯಾರು, ಮತಿಘಟ್ಟ, ಚಿ.ನಾ.ಹಳ್ಳಿ ಮೂರು ಠಾಣೆಗಳಿಂದ ಧ್ವನಿವರ್ಧಕಗಳಿರುವ ಖಾಸಗಿ ವಾಹನಗಳನ್ನು ಬಾಡಿಗೆಗೆ ತೆಗೆದುಕೊಂಡು ಹಳ್ಳಿ ಹಳ್ಳಿಗಳಲ್ಲಿ ತೆರಳಿ ಕೊರೋನಾ ವೈರಸ್ ನಿಯಂತ್ರಿಸಲು ಜನರಿಗೆ ಅರಿವು ಮೂಡಿಸಲಾಗುತ್ತಿದೆ. 40 ಸಾವಿರ ಕರಪತ್ರವನ್ನು ಜನರಿಗೆ ಹಂಚಲಾಗಿದೆ. ಏಪ್ರಿಲ್ 14ರವರೆಗೂ ಕರ್ಪ್ಯೂ ಇರುವುದರಿಂದ ಜನರು ಸುಖಾಸುಮ್ಮನೆ ಹೊರಗಡೆ ಬರಬೇಡಿ ಎಂದರು.

ನಿಯಮ ಮೀರಿ ಮನೆಯಿಂದ ಬಂದವರು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಜರುಗಿಸಲಾಗುತ್ತಿದೆ. ಮತಿಘಟ್ಟ ಗ್ರಾಮದಲ್ಲಿ 144 ಸೆಕ್ಷನ್ ಉಲ್ಲಂಘನೆ ಮಾಡಿದಂತಹ ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿದೆ ಎಂದರು.

ಮನೆ ಬಾಗಿಲಿಗೆ ಹೋಗಿ ತರಕಾರಿ ಮಾರಲು ಅವಕಾಶ: ಹಳ್ಳಿಯಿಂದ ತರಕಾರಿ ತರುವ ರೈತರು ಮಾರುಕಟ್ಟೆ ಬಳಿ ಸೇರಿ ಜನಜಂಗುಳಿಯಾಗುವ ಕಾರಣ ಪುರಸಭಾ ವ್ಯಾಪ್ತಿಯಲ್ಲಿ ಪಟ್ಟಣದ ಬೀದಿಗಳಲ್ಲಿ ತರಕಾರಿಗಳನ್ನು ತಳ್ಳುವ ಗಾಡಿ, ಸೈಕಲ್ ಅಥವಾ ಯಾವುದೇ ವಾಹನಗಳಲ್ಲಿ ತೆರಳಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ, ಇದಕ್ಕಾಗಿ ತಹಶೀಲ್ದಾರ್ ಪಾಸ್ ವ್ಯವಸ್ಥೆ ಮಾಡಿದ್ದಾರೆ ಎಂದರು.

35 ವಾಹನಗಳು ಜಪ್ತಿ: 35 ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳೂ ಸೇರಿದಂತೆ ಮುಂದೆ ಜಪ್ತಿ ಮಾಡುವ ವಾಹನಗಳನ್ನು ಏಪ್ರಿಲ್ 14ರ ವರೆಗೆ ಕೊಡುವುದಿಲ್ಲ. ಕದ್ದು ಮುಚ್ಚಿ ಮದ್ಯ ಮಾರಾಟ ಮಾಡುವುದು ಕಂಡು ಬಂದರೆ ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.