ADVERTISEMENT

ಚಿಕ್ಕನಾಯಕನಹಳ್ಳಿ: ಗಣಿಗಾರಿಕೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 14:41 IST
Last Updated 15 ಜೂನ್ 2025, 14:41 IST
ಉಜ್ಜಜ್ಜಿ ರಾಜಣ್ಣ
ಉಜ್ಜಜ್ಜಿ ರಾಜಣ್ಣ   

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅರೆಮಲೆನಾಡಿನ ರೂಪವನ್ನೆ ಬಲಿ ಪಡೆದಿದ್ದ ಗಣಿಕಾರಿಕೆ ಮತ್ತೆ ಗಣಿಗಾರಿಕೆ ಪ್ರಸ್ತಾವನೆಗೆ ಕೇಂದ್ರ ಸರ್ಕಾರದ ಮೊದಲನೆ ಹಂತದ ಅನುಮತಿಗೆ ರಾಜ್ಯ ಶಿಫಾರಸು ಮಾಡಿರುವ ಬಗ್ಗೆ ಪರಿಸರಾಸಕ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿಯಲ್ಲಿ ಶನಿವಾರ ಸಾರಂಗಪಾಣಿ ಗಣಿಗಾರಿಕೆಗೆ ಅಸ್ತು ಎಂಬ ವರದಿ ಪ್ರಕಟವಾಗಿತ್ತು. ಈ ಕುರಿತು ಅನೇಕ ಪರಿಸರಾಕ್ತರು ಗಣಿಗಾರಿಕೆ ವಿರೋಧಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ನಡೆದ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕನ್ನು ಗಣಿಬಾಧಿತ ಎಂದು ಗುರುತಿಸಲಾಗಿದೆ. ಇದು ರೋಗಬಾಧಿತಕ್ಕಿಂತ ಕ್ರೂರವಾಗಿದ್ದು ಇಲ್ಲಿನ ಜನರ ಜೀವನದ ಸಾಮಾಜಿಕ ಮಟ್ಟ ಈಗಾಗಲೇ ಪಾತಾಳಕ್ಕೆ ಕುಸಿದಿದೆ. ಗೊಲ್ಲರಹಳ್ಳಿ, ಲಕ್ಮೇನಹಳ್ಳಿ, ಕೋಡಿಹಳ್ಳಿ, ಹೊಸಹಳ್ಳಿ, ತೋನಲಾಪುರ ಗ್ರಾಮಗಳಲ್ಲಿ ಮ್ಯಾಂಗನೀಸ್‌ ಮತ್ತು ಕಬ್ಬಿಣದ ಅದಿರು ಗಣಿಗಾರಿಕೆ ಯೋಜನೆಯಿಂದ ಹಳ್ಳಿಗಳ ಅಸ್ಮಿತೆ ಹಾಳಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಉಜ್ಜಜ್ಜಿ ರಾಜಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. 

ADVERTISEMENT

ಚಿಕ್ಕನಾಯಕನಹಳ್ಳಿ ಮೊದಲಿನಿಂದಲೂ ಅರೆಮಲೆನಾಡು. ಅದರ ಕುರುಹಾಗಿ ಮದಲಿಂಗನ ಕಣಿವೆಯ ಪರಿಸರ ಪ್ರದೇಶವನ್ನು ಇಂದಿಗೂ ಕಾಣಬಹುದಾಗಿದೆ. ಈ ಹಿಂದೆ ನಡೆದ ಗಣಿಗಾರಿಕೆಯಿಂದ ತಾಲ್ಲೂಕು ಅರ್ಧ ಹಾಳಾಗಿದೆ. ಮತ್ತೆ ಗಣಿಗಾರಿಕೆ ಆರಂಭವಾದರೆ ತಾಲ್ಲೂಕು ಸಂಪೂರ್ಣ ಬರಡಾಗುತ್ತದೆ ಎನ್ನುತ್ತಾರೆ ಪರಿಸರ ಚಿಂತಕ ಮಹಮದ್‌ ಹುಸೇನ್‌. 

ತಾಲ್ಲೂಕಿನಲ್ಲಿ ರಾಜಕಾರಣಿಗಳ ಕೃಪಾಕಟಾಕ್ಷದಿಂದಲೇ ಗಣಿಗಾರಿಕೆ ಮತ್ತೆ ಆರಂಭವಾಗುತ್ತಿದೆ. ಸಮೃದ್ಧವಾಗಿದ್ದ ತಾಲ್ಲೂಕನ್ನು ಈಗಾಗಲೇ ಬರಡು ಮಾಡಿ ಗುಡ್ಡಗಳನ್ನು ಬೋಳು ಮಾಡಿದ್ದಾರೆ. ಗಣಿಗಾರಿಕೆ ಆರಂಭವಾದರೆ ಮತ್ತು ಗುಡ್ಡಗಳು ನಾಶವಾಗುತ್ತವೆ. ಇವುಗಳ ಜತೆ ಮರಗಿಡಗಳು ನಾಶವಾಗುತ್ತದೆ. ಈಗಾಗಲೇ ತಾಲ್ಲೂಕಿನಲ್ಲಿ ನಡೆದ ಗಣಿಗಾರಿಕೆಯ ದಂಡದ ಹಣ ರಾಜಕಾರಣಿಗಳನ್ನು ದುಂಡಗಾಗಿಸುತ್ತಿದೆ. ಮತ್ತೆ ಗಣಿಗಾರಿಕೆ ಆರಂಭವಾದರೆ ಅವರಿಗೆ ಲಾಭವಾಗುತ್ತದೆ. ಮತ್ತೆ ಗಣಿಗಾರಿಕೆ ನಡೆಸಲು ಕೆಆರ್‌ಎಸ್‌ ಪಕ್ಷ ಬಿಡುವುದಿಲ್ಲ ಎಂದು ಭಟ್ಟರಹಳ್ಳಿ ಮಲ್ಲಿಕಾರ್ಜುನ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.