ADVERTISEMENT

ತುಮಕೂರು: ಶಾಲೆಗಳತ್ತ ಹೊರಟ ಮಕ್ಕಳು, ಹಬ್ಬದ ಸಂಭ್ರಮ

ಆತ್ಮೀಯವಾಗಿ ಬರಮಾಡಿಕೊಂಡ ಶಿಕ್ಷಕರು

​ಪ್ರಜಾವಾಣಿ ವಾರ್ತೆ
Published 17 ಮೇ 2022, 4:13 IST
Last Updated 17 ಮೇ 2022, 4:13 IST
ತುಮಕೂರು ನಗರದ ಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯತ್ತ ಸೋಮವಾರ ಮಕ್ಕಳು ಹೆಜ್ಜೆ ಹಾಕಿದರು 
ತುಮಕೂರು ನಗರದ ಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯತ್ತ ಸೋಮವಾರ ಮಕ್ಕಳು ಹೆಜ್ಜೆ ಹಾಕಿದರು    

ತುಮಕೂರು: ಒಂದೂವರೆ ತಿಂಗಳು ಬೇಸಿಗೆ ರಜೆಯ ನಂತರ ಸೋಮವಾರ ಮತ್ತೆ ಶಾಲೆಗಳು ಪ್ರಾರಂಭವಾದವು. ಮಕ್ಕಳು ಸಮವಸ್ತ್ರ ಧರಿಸಿ ಹುಮ್ಮಸ್ಸಿನಿಂದ ಶಾಲೆಗಳತ್ತ ಹೆಜ್ಜೆ ಹಾಕಿದರೆ, ಶಿಕ್ಷಕರು ಪ್ರೀತಿಯಿಂದ ಮಕ್ಕಳನ್ನು ಬರ ಮಾಡಿಕೊಂಡರು.

ರಾಜ್ಯದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಜಿಲ್ಲೆಯಿಂದಲೇ ಚಾಲನೆ ನೀಡಲಾಯಿತು. ನಗರದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕಲಿಕಾ ಚೇತರಿಕೆ’, ಶೈಕ್ಷಣಿಕ ವರ್ಷ ಆರಂಭಕ್ಕೆ ಚಾಲನೆ ನೀಡಿದರು.

ಶಾಲೆಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಸಿದ್ಧತೆ ಕೈಗೊಂಡಿದ್ದರು. ಹಲವೆಡೆ ಮಕ್ಕಳನ್ನು ವಿಶೇಷವಾಗಿ ಸ್ವಾಗತಿಸಲಾಯಿತು. ಶಾಲೆಗಳನ್ನು ಹೂವಿನಿಂದ ಸಿಂಗರಿಸಲಾಗಿತ್ತು. ಕೆಲವೆಡೆ ಮಕ್ಕಳಿಗೆ ಸಿಹಿ ತಿನಿಸು ಕೊಟ್ಟು ಆತ್ಮೀಯವಾಗಿ ಸ್ವಾಗತಿಸಿದರು.

ADVERTISEMENT

ನಗರದ ಮರಳೂರಿನಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಪಠ್ಯಪುಸ್ತಕ ವಿತರಿಸುವ ಮೂಲಕ ಬರಮಾಡಿಕೊಂಡರು. ಕೆ.ಆರ್‌. ಬಡಾವಣೆ ಸರ್ಕಾರಿ ಶಾಲೆಯ ಕೊಠಡಿಗಳನ್ನು ತಳಿರು ತೋರಣ, ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಗಿಡ, ಪುಸ್ತಕ ನೀಡಲಾಯಿತು.

ಜೂನ್‌ 1ರಿಂದ ಶಾಲೆಗಳು ಆರಂಭವಾಗಬೇಕಿತ್ತು. ಕೋವಿಡ್‌ನಿಂದ ಹಿಂದುಳಿದಿರುವ ಮಕ್ಕಳ ಕಲಿಕೆಯನ್ನು ಸರಿದೂಗಿಸಲು ಅವಧಿಗೂ ಮುನ್ನ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದ ಆನ್‌ಲೈನ್‌, ಆಫ್‌ಲೈನ್‌ ಎರಡು ರೀತಿಯ ತರಗತಿಗಳಿಂದ ಗೊಂದಲಕ್ಕೆ ಒಳಗಾದ ಮಕ್ಕಳು ಕಲಿಕೆಯಲ್ಲಿ ಅಷ್ಟಾಗಿ ತೊಡಗಿಸಿಕೊಂಡಿರಲಿಲ್ಲ. ಪ್ರಸ್ತುತ ಕೋವಿಡ್ ದೃಢಪಡುವುದು ಇಳಿಮುಖವಾದ ಪರಿಣಾಮ ಮಕ್ಕಳ ಕಲಿಕಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.