ADVERTISEMENT

ಪರಂಪರೆ ದಿನ; ಗ್ರಾಮೀಣ ಬದುಕು ಅನಾವರಣ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 12:54 IST
Last Updated 10 ಏಪ್ರಿಲ್ 2019, 12:54 IST
ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಪರಂಪರೆ ದಿನದ ಆಚರಣೆಯಲ್ಲಿ ವಿದ್ಯಾರ್ಥಿನಿಯರು ಸೀರೆ ಉಟ್ಟು ಕಂಗೊಳಿಸಿದರು.
ಚಿಕ್ಕನಾಯಕನಹಳ್ಳಿ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಪರಂಪರೆ ದಿನದ ಆಚರಣೆಯಲ್ಲಿ ವಿದ್ಯಾರ್ಥಿನಿಯರು ಸೀರೆ ಉಟ್ಟು ಕಂಗೊಳಿಸಿದರು.   

ಚಿಕ್ಕನಾಯಕನಹಳ್ಳಿ: ಹುಡುಗಿಯರು ಸೀರೆ ಉಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿದ್ದರೆ, ಹುಡುಗರು ಬಿಳಿ ಪಂಚೆ ರೇಷ್ಮೆ ಅಂಗಿ ತೊಟ್ಟು ಮಿಂಚುತ್ತಿದ್ದರು. ಉಪನ್ಯಾಸಕರು ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಂಡರು. ಹಸು ಹಾಗೂ ಅಲಂಕೃತ ಎತ್ತಿನಗಾಡಿಯನ್ನು ಪೂಜಿಸಲಾಯಿತು.

ತಾಲ್ಲೂಕಿನಲ್ಲಿ ಬೆಳೆಯುವ ರಾಗಿ, ನವಣೆ, ಸಾವೆ, ಆರ್ಕ, ಬರಗು ಮುಂತಾದ ಸಿರಿಧಾನ್ಯಗಳನ್ನು ಪೂಜಿಸಲಾಯಿತು. ಎಳನೀರನ್ನು ರಾಶಿ ಹಾಕಿಕೊಂಡು ಮಾರಾಟ ಮಾಡಲಾಯಿತು. ಈ ಎಲ್ಲ ವಿಶೇಷಗಳು ಕಂಡುಬಂದಿದ್ದು ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ. ಮಂಗಳವಾರ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಪರಂಪರೆ ದಿನವನ್ನಾಗಿ ಆಚರಿಸಲಾಯಿತು.

ಗ್ರಾಮೀಣ ಸೊಗಡನ್ನು ಉಳಿಸೋಣ ಬನ್ನಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ADVERTISEMENT

ಉಪನ್ಯಾಸಕ ಪ್ರಸನ್ನಕುಮಾರ್ ಮಾತನಾಡಿ, ನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ಗ್ರಾಮೀಣ ಸೋಗಡನ್ನು ಉಳಿಸಬೇಕು. ಮುಂದಿನ ಪೀಳಿಗೆಗೆ ಅದು ಆಸ್ತಿಯಾಗಬೇಕು ಎಂಬುದನ್ನು ಸಾಂಕೇತಿಕವಾಗಿ ತೋರಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು ಎಂದರು.

ವಿದ್ಯಾರ್ಥಿಗಳು ಗ್ರಾಮೀಣ ಆಟಗಳಾದ ಕಬಡ್ಡಿ, ಹಗ್ಗ ಜಗ್ಗಟ, ಮಡಿಕೆ ಒಡೆಯುವುದು, ಹಟ್ಟುಗುಣಿ ಮನೆ, ಚೌಕಾಬರ ಮುಂತಾದ ಗ್ರಾಮೀಣ ಆಟಗಳನ್ನು ಆಡಿ ಖುಷಿ ಪಟ್ಟರು. ಹಳ್ಳಿ ಸೋಗಡಿನ ಅಡುಗೆಗಳನ್ನು ಮಾಡಿಕೊಂಡು ಬಂದು ಹಂಚಿಕೊಂಡು ತಿಂದರು. ಕೋಲಾ ಪೆಪ್ಸಿ ಬಿಟ್ಟು ಎಳನೀರು ಕುಡಿದರು. ಬರ್ಗರ್, ಬ್ರೇಡ್, ಬಿಟ್ಟು ಹೆಸರು ಕಾಳು ಕಡಲೆಕಾಳು ಖಾದ್ಯ ಸವಿದರು.

ಹಳ್ಳಿಯಲ್ಲಿ ತಯಾರು ಮಾಡುವಂತಹ ವಿವಿಧ ಬಗೆಯ ಅಡುಗೆಯನ್ನು ವಿದ್ಯಾರ್ಥಿನಿಯರೇ ತಯಾರಿಸಿ ಬಡಿಸಿದರು. ಹೀಗೆ ಇಡೀ ದಿನ ಕಾಲೇಜು ಆವರಣದಲ್ಲಿ ಹಳ್ಳಿಯ ಬದುಕು ಅನಾವರಣಗೊಂಡಿತು. ಗ್ರಾಮೀಣ ಸೊಗಡು ಉಳಿಸುವ ಬನ್ನಿ ಎಂದು ಘೋಷಣೆ ಕೂಗುವ ಮೂಲಕ ವಿಶೇಷ ಪರಂಪರೆಯ ದಿನವನ್ನು ಆಚರಣೆ ಮಾಡಲಾಯಿತು.

ವಿದ್ಯಾರ್ಥಿನಿಯರೇ ಮುಂದೆ ನಿಂತು ಇಡೀ ಕಾರ್ಯಕ್ರಮ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಶಿವಕುಮಾರ್, ಶಿವರಾಮಯ್ಯ, ಡಾ.ಗೋವಿಂದರಾಯ, ಆಯೋಜಕರಾದ ಮಮತಾ, ಪದ್ಮಶ್ರೀ, ನಾಗರಾಜು, ಸುಧಾಮಣಿ, ಗಂಗಮ್ಮ, ವನರಾಜಯ್ಯ ಸೇರಿದಂತೆ ಎಲ್ಲ ಉಪನ್ಯಾಸಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.