ADVERTISEMENT

ಶೇ 40 ಕಮಿಷನ್: ನ್ಯಾಯಾಂಗ ತನಿಖೆಯಾಗಲಿ: ಡಿ.ಕೆ.ಶಿವಕುಮಾರ್

ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಕಿಕ್‌ಬ್ಯಾಕ್‌: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:09 IST
Last Updated 5 ಡಿಸೆಂಬರ್ 2021, 5:09 IST
ತುಮಕೂರಿನಲ್ಲಿ ಶನಿವಾರ ಕೆಪಿಸಿಸಿ ಏರ್ಪಡಿಸಿದ್ದ ‘ವ್ಯಾಕ್ಸಿನೇಟ್ ಕರ್ನಾಟಕ’ ವಿಡಿಯೊ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ಯಾಬ್ ವಿತರಿಸಿದರು. ಮುಖಂಡರಾದ ಟಿ.ಬಿ.ಜಯಚಂದ್ರ, ಷಫಿಅಹ್ಮದ್, ಪ್ರೊ.ರಾಧಾಕೃಷ್ಣ ಇದ್ದಾರೆ
ತುಮಕೂರಿನಲ್ಲಿ ಶನಿವಾರ ಕೆಪಿಸಿಸಿ ಏರ್ಪಡಿಸಿದ್ದ ‘ವ್ಯಾಕ್ಸಿನೇಟ್ ಕರ್ನಾಟಕ’ ವಿಡಿಯೊ ಕಿರುಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ಯಾಬ್ ವಿತರಿಸಿದರು. ಮುಖಂಡರಾದ ಟಿ.ಬಿ.ಜಯಚಂದ್ರ, ಷಫಿಅಹ್ಮದ್, ಪ್ರೊ.ರಾಧಾಕೃಷ್ಣ ಇದ್ದಾರೆ   

ತುಮಕೂರು: ಕಾಮಗಾರಿಗಳಲ್ಲಿ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎಂಬ ಆರೋಪದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಲ್ಲಿ ಶನಿವಾರ ಆಗ್ರಹಿಸಿದರು.

ಹಾಲಿ ನ್ಯಾಯಮೂರ್ತಿ ಅಥವಾ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರಲು ಸಾಧ್ಯ. ನ್ಯಾಯಾಂಗ ತನಿಖೆ ಬೇಡ ಎನ್ನುವುದಾದರೆ ಜಂಟಿ ಸದನ ಸಮಿತಿ ರಚಿಸಿದರೆ ನಾವೇ ಸತ್ಯ ಹೊರ ತರುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್ ತೆಗೆದುಕೊಳ್ಳಲಾಗುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿಗೆ ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಜಲಸಂಪನ್ಮೂಲ ಇಲಾಖೆ ಮೇಲೂ ಕಮಿಷನ್ ಆರೋಪಗಳಿದ್ದು, ಅದೇ ಇಲಾಖೆ ಅಧಿಕಾರಿ ತನಿಖೆ ನಡೆದರೆ ಸತ್ಯ ಹೊರ ಬರುವುದೆ? ಎಂದು ಪ್ರಶ್ನಿಸಿದರು.

ADVERTISEMENT

ಮೇಕೆದಾಟು: ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಜನವರಿ ಮೊದಲ ವಾರ ಮೇಕೆದಾಟಿನಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಕೇಂದ್ರ ಪರಿಸರ ಇಲಾಖೆಯಿಂದ ಒಪ್ಪಿಗೆಯಷ್ಟೇ ಸಿಗಬೇಕಿದೆ. ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಇದ್ದು, ಇದೊಂದು ಅನುಮತಿ ಪಡೆದು ಕೆಲಸ ಆರಂಭಿಸಲು ಸಾಧ್ಯವಾಗಿಲ್ಲ. ಒತ್ತಡ ತರುವ ಸಲುವಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಕೇಂದ್ರಕ್ಕೆ ನಿಯೋಗ: ರಾಜ್ಯದಲ್ಲಿರುವ ಕೇಂದ್ರದ ಹಲವು ಸಂಸ್ಥೆಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿದೆ. ರಾಜ್ಯದ ಯೋಜನೆಗಳಿಗೆ ಒಪ್ಪಿಗೆ ಸಿಗುತ್ತಿಲ್ಲ. ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಲಾಗುತ್ತಿದೆ. ಇರುವ ಸಂಸ್ಥೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮುಖ್ಯಮಂತ್ರಿ ಬಾಯಿ ಬಿಡುತ್ತಿಲ್ಲ. ಸಂಸತ್ ಸದಸ್ಯರು ಮಾತನಾಡುತ್ತಿಲ್ಲ. ಹಾಗಾಗಿ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಬೇಕು. ಬಿಜೆಪಿಯವರ ಪರವಾಗಿ ನಾವೇ ನಮ್ಮ ಹಕ್ಕುಗಳನ್ನು ಕೇಳುತ್ತೇವೆ ಎಂದು ಆಗ್ರಹಿಸಿದರು.

ಎತ್ತಿನಹೊಳೆ ಯೋಜನೆ ಕಾಮಗಾರಿ ಹಾಸನದವರೆಗೆ ಬಂದು ನಿಂತಿದೆ. ತುಮಕೂರು ಜಿಲ್ಲೆ ಮೂಲಕ ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

‘ನಾವು ಈಗ ವಿರೋಧ ಪಕ್ಷದಲ್ಲಿ ಇದ್ದೇವೆ. ಬಿಜೆಪಿ, ಜೆಡಿಎಸ್ ಮುಖಂಡರು ಆಡಳಿತ ಪಕ್ಷ ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಎಲ್ಲರೂ ಈಗ ನಮ್ಮತ್ತ ನೋಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.